

ಹಾವೇರಿ: ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಖಾಸಗೀಕರಣ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದಿಂದ ಶನಿವಾರ ನಗರದ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೊಳಿಸುವ ಮೂಲಕ ಸರ್ಕಾರ ಹಣವಂತರು, ಕಾಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದನ್ನು ತಿಳಿಸಿದೆ. ಕೃಷಿಯನ್ನು ಅವಲಂಭಿಸಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದ ರೈತರನ್ನು ಗುಲಾಮಗಿರಿಗೆ ನೂಕುವ ಹುನ್ನಾರ ಇದರಲ್ಲಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತ ವಿರೋಧಿಯಾಗಿದೆ. ಇದರಿಂದ ರೈತರ ನೆಮ್ಮದಿ ಹಾಳಾಗಿದೆ. ಕೂಡಲೇ ರೈತ ವಿರೋಧಿಯಾಗಿರುವ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು.
ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಮಂಜುಳಾ ಅಕ್ಕಿ, ರುದ್ರಗೌಡ ಕಾಕನಗೌಡ್ರ, ಪ್ರಭುಗೌಡ ಪ್ಯಾಟಿ, ಸುರೇಶ ಚಲವಾದಿ, ಕರಬಸಪ್ಪ ಅಗಸಿಬಾಗಿಲು ಇತರರಿದ್ದರು.