ಭೂ ಸಮಸ್ಯೆ ಪರಿಹರಿಸಲು ಡಿಸಿಗೆ ಮನವಿ

HUN-NOV-29-1(MEMORENDUM TO DC BY TRIBLES)
Published on

ಹುಣಸೂರು: ತಾಲೂಕಿನ ವಿವಿಧ ಹಾಡಿಗಳಲ್ಲಿನ ಭೂ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು 14 ಹಾಡಿಗಳ ಪ್ರತಿನಿಧಿಗಳ ನಿಯೋಗದೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ.ರಾಮು ತಿಳಿಸಿದರು. ಬುಡಕಟ್ಟು ಕೃಷಿಕರ ಸಂಘದ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ವಿಜಯವಾಣಿಗೆ ಮಾಹಿತಿ ನೀಡಿದರು.


ಇತ್ತೀಚೆಗೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ನಡೆಸಿದ್ದ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಆದಿವಾಸಿಗಳ ಭೂಮಿಯ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ತಾಲೂಕಿನ 14 ಹಾಡಿಗಳ ಪ್ರತಿನಿಧಿಗಳೊಂದಿಗೆ ವಿವಿಧ ಹಾಡಿಗಳಲ್ಲಿನ ಭೂ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ಹಾಡಿಯ ಸಮಸ್ಯೆ ಕುರಿತು ಪ್ರತ್ಯೇಕವಾಗಿಯೇ ಮನವಿ ಸಲ್ಲಿಸಲಾಗಿದೆ.

ತೆಕ್ಕಲಾಡಿ ಮತ್ತು ಮಾದಯ್ಯನಕಟ್ಟೆ ಹಾಡಿಯ ಜನರಿಗೆ ಕಾಡು ವಡ್ಡರ ಗುಡಿ ಸರ್ವೇ ನಂ 33ರಲ್ಲಿ 117 ಎಕರೆ ಭೂಮಿಯನ್ನು ಹಂಚಬೇಕು, ದಾಸನಪುರ ಸರ್ವೇ ನಂ 11, 12 ಮತ್ತು 13 ರಲ್ಲಿ ವಿಜಯಗಿರಿ ಹಾಡಿಯ 130 ಕುಟುಂಬಗಳಿಗೆ ನೀಡಿರುವ 260 ಎಕರೆ ಭೂಮಿಯ ಹದ್ದುಬಸ್ತು ಗುರುತಿಸಿ, ಒತ್ತುವರಿದಾರರನ್ನು ತೆರವುಗೊಳಿಸಿ ಹಕ್ಕುಪತ್ರ ನೀಡಬೇಕು, ನೇರಳಕುಪ್ಪೆ ಬಿ ಹಾಡಿಯ 7 ಕುಟುಂಬಗಳು ಸರ್ವೇ ನಂ 14, 24 ಮತ್ತು 25 ರಲ್ಲಿ ಅನುಭವಿಸುತ್ತಿರುವ ಭೂಮಿಗೆ ಸಾಗುವಳಿ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ ಎಂದರು.

ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಜಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ, ವಿಜಯಗಿರಿ ಭೂಮಿದಾರರ ಸಂಘದ ಅಧ್ಯಕ್ಷ ಬಸವರಾಜು, ಕ್ಷೇತ್ರ ಅಧ್ಯಯನಕ್ಕೆ ಬಂದಿರುವ ಎಂ.ಎಸ್.ಡಬ್ಲುೃ ವಿದ್ಯಾರ್ಥಿಗಳಾದ ಅಫ್ಸಾನ್, ಅಫ್ರೀನ್ ವಿವಿಧ ಹಾಡಿಗಳಿಂದ ಶಿವಣ್ಣ, ಮಣಿ, ಕಲ್ಲುರಯ್ಯ, ದೊಡ್ಡಮಾರ, ಈರಯ್ಯ, ಮುನಿಮಾರ, ಮಾದಪ್ಪ, ಗೋವಿಂದ ಮುಂತಾದವರು ಹಾಜರಿದ್ದರು. ಮನವಿಯನ್ನು ಕಚೇರಿಯ ತಹಸೀಲ್ದಾರ್ ಶಿವಪ್ರಸಾದ್ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net