

ಮಂಜುನಾಥ್ ಹೊಸಕೋಟೆ
ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಖಾಸಗಿ ಕಂಪನಿಗಳು ಅಕ್ರಮವಾಗಿ ಭೂಮಿ ಒಡಲು ಬಗೆದು ಲೋಡ್‌ಗಟ್ಟಲೆ ಮಣ್ಣು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ.
ನಗರದ ಹೊರವಲಯದ ಕಸಬಾ ಹೋಬಳಿಯ ನಗರೇನಹಳ್ಳಿ ರಸ್ತೆಯ ಚಿಕ್ಕಹುಲ್ಲೂರು ಗ್ರಾಮದ ಬಳಿ ಕೆಐಡಿಬಿಗೆ ಸೇರಿದ ಸರ್ವೇ ನಂ.25ರಲ್ಲಿ 10 ಎಕರೆಗಿಂತ ಹೆಚ್ಚು ಜಾಗದಲ್ಲಿ ಭೂಮಿ ಅಗೆದು ಖಾಸಗಿ ಕಂಪನಿಗಳು ಮಣ್ಣು ಲೂಟಿ ಮಾಡುತ್ತಿವೆ, ಚೊಕ್ಕಳ್ಳಿ
ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ವೇರ್ ಹೌಸ್ ಜಾಗದಲ್ಲಿ ಸಾವಿರಾರು ಲೋಡ್ ಮಣ್ಣು ಸುರಿಯಲಾಗಿದೆ.
ರಾತ್ರಿವೇಳೆ ಕಾರ್ಯಾಚರಣೆ: ಯಾವುದೇ ಇಲಾಖೆಯಿಂದ ಅನುಮತಿ ಇಲ್ಲದೆ ಕಳ್ಳತನದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಈ ಬಗ್ಗೆ ಚಿಕ್ಕಹುಲ್ಲೂರು ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದರೂ ಸ್ಥಳೀಯ ಆಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಇದು ನಮ್ಮ ಸುಪರ್ದಿಗೆ ಸೇರಿದ ಜಾಗವಲ್ಲ, ಕೆಐಡಿಬಿಗೆ ಸೇರಿದ ಜಾಗ ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಕಣ್ಣೆದುರೆ ಲೂಟಿ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಅಕ್ರಮ ಮಣ್ಣು ಗಣಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳೊಂದಿಗೆ ಮಾತನಾಡಲಾಗುವುದು.
ಸವಿತಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ
ಇಲಾಖೆ ಅಧಿಕಾರಿಗಳು ಅಕ್ರಮ ಮಣ್ಣಿನ ಗಣಿಗಾರಿಕೆ ತಡೆಯಲು ಮುಂದಾದರೆ ಲಾರಿ ಹತ್ತಿಸುವ ಬೆದರಿಕೆಗಳು ಬಂದಿವೆೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸ್ಥಳಿಯ ಪೊಲೀಸ್ ಠಾಣೆಗೂ ಪತ್ರ ಬರೆಯಲಾಗಿದೆ, ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು.
ಆದರ್ಶ ಅಭಿಯಂತರ ಕೆಐಎಡಿಬಿ
ಚಿಕ್ಕಹುಲ್ಲೂರುನ ಕೆಐಎಡಿಬಿ ಭೂ ಪ್ರದೇಶದಲ್ಲಿ ಈ ಮೊದಲು ಅಕ್ರಮವಾಗಿ ಮಣ್ಣು ಗಣಿಗಾರಿಕೆ ಸಂಬಂಧ ವಾಹನಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲಾಗಿತ್ತು, ಮತ್ತೆ ಅಕ್ರಮವಾಗಿ ಮಣ್ಣಿನ ಗಣಿಗಾರಿಕೆ ಬಗ್ಗೆ ದೂರು ಬಂದಿಲ್ಲ, ಈ ಬಗ್ಗೆ ನಿಗಾ ವಹಿಸಲಾಗುವುದು.
ಅಶೋಕ್ ವೃತ್ತ ನಿರೀಕ್ಷಕ, ಹೊಸಕೋಟೆ
ಸರ್ವೇ ನಂ.25 ಜಾಗ ಸಂಪೂರ್ಣ ವಾಗಿ ಕೆಐಎಡಿಬಿಗೆ ಹಸ್ತಾಂತರಿಸಲಾಗಿದ್ದು ಜಾಗವನ್ನು ಭದ್ರಪಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಇದಕ್ಕೂ ನಮಗೂ ಸಂಬಂಧವಿಲ್ಲ.
ಆಂಜಿನಮ್ಮರಾಜಸ್ವ ನಿರೀಕ್ಷಕಿ, ಹೊಸಕೋಟೆ
ಅಕ್ರಮಕ್ಕೆ ಸಹಕಾರ: ಈ ಬಗ್ಗೆ ಸ್ಥಳೀಯ ಠಾಣೆಗೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪ್ರತಿಕ್ರಿಯಿಸುತ್ತಿರುವ ಕೆಐಎಡಿಬಿ ಅಧಿಕಾರಿಗಳು ಪರೋಕ್ಷವಾಗಿ ಅಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪಗಳು ಆಗಿಂದಾಗ್ಗೆ ಕೇಳಿಬರುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಲೇ ಇದ್ದಾರೆ, ಇದರ ಹಿಂದೆ ಜನಪ್ರತಿನಿಧಿಗಳ ಕುಮ್ಮಕ್ಕು ಇದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.