ಭೂ ಮಾಲೀಕರಿಗೆ ‘ಸಾಂತ್ವನ’ ನಿವೇಶನ ಹಂಚಿಕೆ

6
Published on

ಮೈಸೂರು: ಕರ್ನಾಟಕ ಗೃಹ ಮಂಡಳಿ ವತಿಯಿಂದ ತಾಲೂಕಿನ ಇಲವಾಲ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ‘ಕೆಆರ್‌ಎಸ್ ನಿಸರ್ಗ ಬಡಾವಣೆಯ’ ಭೂ ಮಾಲೀಕರಿಗೆ ಶುಕ್ರವಾರ ‘ಸಾಂತ್ವನ’ ನಿವೇಶನಗಳನ್ನು ಹಂಚಿಕೆ ಮಾಡಲಾಯಿತು.

ಕೆಆರ್‌ಎಸ್ ನಿಸರ್ಗ ಬಡವಾಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಗೃಹ ಮಂಡಳಿಗೆ ಭೂಮಿ ನೀಡಿದ್ದ ಯಲಚಹಳ್ಳಿ, ಗುಂಗ್ರಾಲ್ ಛತ್ರ ಹಾಗೂ ಕಲ್ಲೂರು ನಾಗನಹಳ್ಳಿ ಕಾವಲ್ ಗ್ರಾಮದ 137 ಭೂಮಾಲೀಕರಿಗೆ 334 ನಿವೇಶನ ಹಂಚಿಕೆ ಪತ್ರವನ್ನು ವಸತಿ ಸಚಿವ ವಿ.ಸೋಮಣ್ಣ ವಿತರಿಸಿದರು.

ಸದರಿ ಯೋಜನೆಯಡಿ ಯಲಚಹಳ್ಳಿ, ಗುಂಗ್ರಾಲ್ ಛತ್ರ ಹಾಗೂ ಕಲ್ಲೂರು ನಾಗನಹಳ್ಳಿ ಕಾವಲ್ ಗ್ರಾಮಗಳ ರೈತರಿಂದ 496 ಎಕರೆ ಭೂಮಿಯನ್ನು ಕೆಎಚ್‌ಬಿ ವಶಪಡಿಸಿಕೊಂಡು, 686.02 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದೆ. ವಿವಿಧ ವರ್ಗದ 6309 ನಿವೇಶನ, ವಿವಿಧ ವರ್ಗದ 207 ಮನೆ, 18 ಸಿಎ ನಿವೇಶನ ಹಾಗೂ 54 ಉದ್ಯಾನಗಳನ್ನು ನಿರ್ಮಿಸಿದೆ. ಈ ಪೈಕಿ 2934 ಮಧ್ಯಂತರ ನಿವೇಶನ ಹಂಚಿಯಾಗಿದೆ. 1188 ಮೂಲೆ ನಿವೇಶನಗಳಿದ್ದು, 2187 ಮಧ್ಯಂತರ ನಿವೇಶನ ಬಾಕಿ ಇದೆ. ಈಗಾಗಲೇ 66 ಮನೆಗಳು ಹಂಚಿಕೆಯಾಗಿದ್ದು, 141 ಮನೆಗಳು ಹಂಚಿಕೆಯಾಗಬೇಕಿದೆ.

ಒಟ್ಟಾರೆ 185 ಭೂಮಾಲೀಕರಿಗೆ 484 ‘ಸಾಂತ್ವನ’ ನಿವೇಶನಗಳನ್ನು ಹಂಚಿಕೆ ಮಾಡಬೇಕಿದೆ. ಈ ಪೈಕಿ 137 ಭೂಮಾಲೀಕರಿಗೆ 33 ಇಡಬ್ಲ್ಯುಎಸ್ ಮತ್ತು 301 ಎಲ್‌ಐಜಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನು 48 ಭೂಮಾಲೀಕರಿಗೆ ಹಂಚಿಕೆಯಾಗಬೇಕಾದ 150 ಸಾಂತ್ವನ ನಿವೇಶನಗಳ ಪ್ರಕರಣ ನ್ಯಾಯಾಲಯದಲ್ಲಿದೆ.

ಬಡಾವಣೆ ಅಭಿವೃದ್ಧಿಗೆ 7.5 ಕೋಟಿ ರೂ. ಬಿಡುಗಡೆ:

ಕೆಆರ್‌ಎಸ್ ನಿಸರ್ಗ ಬಡಾವಣೆಯನ್ನು ಉಪ ನಗರವಾಗಿ ಅಭಿವೃದ್ಧಿ ಪಡಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುವುದು. ಸದ್ಯ ಬಡಾವಣೆಯಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣ, ರಸ್ತೆ, ನೀರು, ವಿದ್ಯುತ್ ಸೇರಿದಂತೆ ನಾನಾ ಅಭಿವೃದ್ಧಿ ಕೆಲಸಕ್ಕೆ 7.5 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ಬಡಾವಣೆಗೆ ಸಂಬಂಧಿಸಿದ ಇಂಜಿನಿಯರ್ ಇಲ್ಲೇ ಕಚೇರಿ ತೆರೆದು ಮನೆ ಕಟ್ಟುವರಿಗೆ ಎಲ್ಲ ರೀತಿ ನೆರವು ನೀಡಬೇಕು. ಇಲ್ಲಿ ವಾಸ ಮಾಡುವವರಿಗೆ ಎಲ್ಲ ಸೌವಲತ್ತು ಸಿಗುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಬಡಾವಣೆಯಲ್ಲಿ ಒಂದೇ ಒಂದು ಗಿಡ ಬೆಳೆದರು ಸಂಬಂಧಿಸಿದ ಇಂಜಿನಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಬಡಾವಣೆಗೆ ಭೂಮಿ ನೀಡಿರುವ ಒಬ್ಬರೆ ಒಬ್ಬ ಭೂಮಾಲೀಕರಿಗೆ ನಿವೇಶ ಸಿಕ್ಕಿಲ್ಲ ಎಂಬ ದೂರು ಕೇಳಿ ಬಂದರೂ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಸರ್ಕಾರ ಹರಿಯುವ ನೀರಿದಂತೆ. ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನೇಕ ಯೋಜನೆ ರೂಪಸಿದ್ದಾರೆ. ವಸತಿ ಇಲಾಖೆಗೂ ಚೈತನ್ಯ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಭಾರತಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಲ್ಲಿ ವಸತಿ ಇಲಾಖೆ ನಾನಾ ಕಾರ್ಯಕ್ರಮಗಳನ್ನು ರೂಪಿಸಿದೆ. ಮನೆ ಇಲ್ಲದವರಿಗೆ ಮನೆ ನೀಡುವ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.

ದುಃಖ ತೊಡಿಕೊಂಡ ಜಿಟಿಡಿ: ‘ಕೆಆರ್‌ಎಸ್ ನಿಸರ್ಗ ಬಡಾವಣೆಯ’ ಯೋಜನೆ ಸಂಬಂಧ ಹಿಂದೆ ಕೇಳಿ ಬಂದ ಹಗರಣ ಸಂಬಂಧ ಶಾಸಕ ಜಿ.ಟಿ.ದೇವೇಗೌಡ ದುಃಖ ತೊಡಿಕೊಂಡರು.

ಹಿಂದೆ ಇಲ್ಲಿನ ಸುತ್ತಮುತ್ತಲಿನ ರೈತರು ಸಾಗುವಳಿ ಪಡೆಯದ್ದೆ ಇದ್ದ ಸಂದರ್ಭದಲ್ಲಿ ನಾನು ಹೋರಾಟ ಮಾಡಿ ಸಾಗುವಳಿ ಚೀಟಿ ಕೊಡಿಸಿದ್ದೇನೆ. ಆದರೆ, ಈಗಿನ ಜನರು ನನ್ನನು ಅಪಮಾನ ಮಾಡಿದ್ದೀರಿ. ನಾನು ಯಾರಿಗಾದರೂ ಭೂಮಿ ಮಾರಾಟ ಮಾಡಿ, ಹಣ ನೀಡಿ ಎಂದು ಕೇಳಿದ್ದನಾ? ಎಂದು ಪ್ರಶ್ನಿಸಿದ ಅವರು, ಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಯಿತು ಎಂದು ದುಃಖ ತೋಡಿಕೊಂಡರು.

ಭೂಮಿ ಮಾರಾಟ ಮಾಡಿದ ರೈತರಿಗೆ ಅನ್ಯಾಯವಾಗಬಾರದು ಎಂದು ಹೋರಾಟ ಮಾಡಿ ‘ಸಾಂತ್ವನ’ ನಿವೇಶನಗಳನ್ನು ಕೊಡಿಸುತ್ತಿದ್ದೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ಈ ಬಡಾವಣೆಯ ಹಿಂಭಾಗ ಕೃಷ್ಣರಾಜ ಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಅದು ತೀರ ಹದಗೆಟ್ಟಿದೆ. ಇಲ್ಲಿ ಉತ್ತಮ ರಸ್ತೆ ನಿರ್ಮಿಸಿದರೆ ಕೆಆರ್‌ಎಸ್ ಮತ್ತು ಮಂಡ್ಯ ಜಿಲ್ಲೆಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು ಎಂದರು.

ಸೋಮಣ್ಣ ವಸತಿ ಸಚಿವರಾಗಿ ನೇಮಕಗೊಂಡ ಬಳಿಕ ರಾಜ್ಯದಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಎಸ್‌ಸಿ ಮತ್ತು ಎಸ್ಟಿ ಜನಾಂಗಕ್ಕೆ ಗೃಹ ಮಂಡಳಿಯಲ್ಲಿ ಶೇ.24ರಷ್ಟು ಮೀಸಲಿಡಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಮಾರಬೇಡಿ:

ಈಗಾಗಲೇ ಭೂಮಿಯನ್ನು ಮಾರಾಟ ಮಾಡಿ ರೈತರಾಗಿದ್ದ ನೀವು ಕೂಲಿ ಕಾರ್ಮಿಕರಾಗಿದ್ದೀರಿ. ಈಗ ಗೃಹ ಮಂಡಳಿ ನಿಮಗೆ ನೀಡಿರುವ ಸಾಂತ್ವನ ನಿವೇಶನಗಳು ಹಾಗೂ ನಿಮ್ಮ ಇತರ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಭೂಮಿ, ನಿವೇಶಗಳನ್ನು ಮಾರಾಟ ಮಾಡಿ ಮಕ್ಕಳ ಮದುವೆ ಮತ್ತು ಬೀಗರ ಊಟವನ್ನು ಜೋರಾಗಿ ಮಾಡುವ ಬದಲು, ಸರಳವಾಗಿ ಮದುವೆ ಮಾಡಿ ಅದೇ ನಿವೇಶನವನ್ನು ತಮ್ಮ ಮಕ್ಕಳಿಗೆ ನೀಡಿ ಎಂದು ಸಲಹೆ ನೀಡಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ಕಾಳಮ್ಮ ಕೆಂಪರಾಮಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಿಕಾ ಸುರೇಶ್, ಎಸ್.ಅರುಣ್‌ಕುಮಾರ್, ದಿನೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ , ಗೃಹ ಮಂಡಳಿಯ ಆಯುಕ್ತ ಡಿ.ಎಸ್.ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net