

ಭೂಮಿ ತಾಯಿ ಹೋರಾಟ ಸಮಿತಿ ಆಗ್ರಹ
ಶ್ರೀರಂಗಪಟ್ಟಣ : ತಾಲೂಕಿನಲ್ಲಿ ಇತ್ತೀಚೆಗೆ ಭೂ ಮಾಫಿಯಾ ಹಾಗೂ ಆಡಳಿತದಲ್ಲಿ ಲೂಟಿಕೋರರ ಧಂಧೆ ತೀವ್ರವಾಗಿದ್ದು, ಕ್ಷೇತ್ರದ ಶಾಸಕರ ಶ್ರೀರಕ್ಷೆಯಲ್ಲಿ ಅವರ ಕೆಲ ಹಿಂಬಾಲಕರು ಸುಲಿಗೆ ಮಾಡುತ್ತಿದ್ದಾರೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಗಂಭೀರ ಆರೋಪ ಮಾಡಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಬುಧವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ತಾಲೂಕಿನ ಕಸಬಾ ಮತ್ತು ಬೆಳಗೊಳ ಹೋಬಳಿಗಳ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿ ಗ್ರಾಮಗಳಲ್ಲಿನ ಗೋಮಾಳ, ಅರಣ್ಯ ಭೂಮಿ ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ ಕಂದಾಯ ಭೂಮಿಗಳನ್ನು ಕೆಲ ಪ್ರಭಾವಿಗಳು ಕಬಳಿಸುತ್ತಿದ್ದಾರೆ. ಭೂ ಮಾಫಿಯಾ ಧಣಿಗಳು ನಕಲಿ ದಾಖಲೆಗಳನ್ನು ಸೃಷ್ಠಿಸಿ ಬೃಹತ್ ಖಾಸಗಿ ಬಡಾವಣೆಗಳು ಹಾಗೂ ವಾಣಿಜ್ಯೋದ್ಯಮ ಸಂಕೀರ್ಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ತಾಲೂಕಿನ ಬೆಳವಾಡಿ ಸರ್ವೆ ನಂ.64ರ ಸುಮಾರು 40 ಎಕರೆ ಸರ್ಕಾರಿ ಜಮೀನು ಕಬಳಿಕೆಯಾಗಿದೆ. ಸರ್ವೆ ನಂ.23ರಲ್ಲಿರುವ ಅರಣ್ಯ ಭೂಮಿಯಲ್ಲಿ ರಾಜರೋಷವಾಗಿ ಖಾಸಗಿ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಕೆ.ಆರ್.ಎಸ್ ರಸ್ತೆಯ ಹುಲಿಕೆರೆ ಗ್ರಾಮದ ಜುವಾರಿ ಗಾರ್ಡ್‌ನ್ ಸಿಟಿ ಖಾಸಗಿ ಬಡಾವಣೆ ಮಾಲೀಕರೂ ಸಾರ್ವಜನಿಕ ರಸ್ತೆ ಕಬಳಿಸಿದ್ದಾರೆ. ಪೇಪರ್ ಮಿಲ್ ವೃತ್ತದ ಬಳಿಯ ಗ್ಯಾಮನ್ ಕಾರ್ಖಾನೆ ಬಳಿ ಸರ್ಕಾರಿ ಖರಾಬು ಭೂಮಿ ಕಬಳಿಸಿ ಈಗಾಗಲೇ ಬಡಾವಣೆ ನಿರ್ಮಾಣವಾಗಿದೆ ಎಂದು ಕೆ.ಎಸ್.ನಂಜುಂಡೇಗೌಡ ಗಂಭೀರ ಆರೋಪಿಸಿದರು.
ಅಧಿಕಾರಿಗಳ ಮೌನ: ಅಧಿಕೃತ ದಾಖಲೆ ಹೊಂದಿರುವ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಭೂಮಿಗಳ ಕಬಳಿಕೆಯಾಗುತ್ತಿದ್ದರೂ ತಾಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ. ಪ್ರಕರಣ ಕಂಡೂ ಕಾಣದಂತೆ ಸುಮ್ಮನಿದ್ದಾರೆ. ಹೋರಾಟಗಾರರು ಅಕ್ರಮಗಳ ಬಗ್ಗೆ ಮನವಿ ನೀಡಿ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರೂ
ಯಾವುದೇ ಕ್ರಮ ವಹಿಸಿಲ್ಲ. ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದರು. ತಾಲೂಕು ಆಡಳಿತದ ಎಲ್ಲ ಸರ್ಕಾರಿ ಇಲಾಖೆಗಳಲ್ಲೂ ಶಾಸಕರ ಹಿಂಬಾಲಕರ ಅಣತಿಯಂತೆ ಅಧಿಕಾರಿ, ಸಿಬ್ಬಂದಿಗಳು ಕಾರ್ಯನಿರ್ವಹಿಸಿ ಅಕ್ರಮಕ್ಕೆ ನೇರ ನೆರವಾಗುತ್ತಿದ್ದಾರೆ ಎಂದು ಕೆ.ಎಸ್.ನಂಜುಂಡೇಗೌಡ ಟೀಕಿಸಿದರು.
ರೇಷನ್ ಕಾರ್ಡ್‌ಗಳ ಅಕ್ರಮ: ಬಿಪಿಎಲ್ ಪಡಿತರ ಕಾರ್ಡ್‌ಗಳ ಅಕ್ರಮಕ್ಕೆ ಕಡಿವಾಣಿ ಹಾಕುವ ವಿಚಾರದಲ್ಲಿ ಸರ್ಕಾರ ಗೊಂದಲ ಸೃಷ್ಠಿಸಿದೆ. ವಂಚಿತರಿಗೆ ಕಾರ್ಡ್ ತಪ್ಪಿಸುವ ಬದಲು ಅರ್ಹ ಬಡ ಕುಟುಂಬಗಳ ಕಾರ್ಡುಗಳನ್ನು ರದ್ದುಪಡಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು
ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಅವರು ಡಿಸಿಗೆ ಮನವಿ ಮಾಡಿದರು.
ಸ್ಥಳದಲ್ಲೇ ಸೂಚನೆ: ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಬಳಿಕೆಯಾಗುತ್ತಿರುವ ಭೂಮಿ ಸರ್ಕಾರಕ್ಕೆ ಸೇರಿದ್ದರೆ ತಕ್ಷಣ ಅವುಗಳ ಸೂಕ್ತ ದಾಖಲೆಗಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಅತಿಕ್ರಮ ನಡೆಸಿರುವವರಿಗೆ ಯಾವುದೇ ನೋಟಿಸ್ ನೀಡದೆ ನೇರ ಕ್ರಮಕ್ಕೆ ಮುಂದಾಗಿ ಸರ್ಕಾರದ ವಶಕ್ಕೆ ಭೂಮಿ ಪಡೆಯಬೇಕು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರಿಗೆ ಆದೇಶ ನೀಡಿದರು. ಬಿಪಿಎಲ್ ರೇಷನ್ ಕಾರ್ಡ್ ವಿಚಾರದಲ್ಲಿ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಭೂಮಿ ತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷರಾದ ಹನಿಯಾಂಬಡಿ ನಾಗರಾಜು, ಮೇಳಾಪುರ ಜಯರಾಮೇಗೌಡ, ಜಗದೀಶ್ ಗೌಡ, ಮರೀಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಮಹದೇವು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.