

ಎನ್.ಆರ್.ಪುರ: ಕಂದಾಯ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಿಂದ ಇನ್ನುಮುಂದೆ ರೈತರ ಎಲ್ಲ ದಾಖಲೆಗಳೂ ಸುಲಭವಾಗಿ ಲಭ್ಯವಾಗುತ್ತವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶುಕ್ರವಾರ ತಾಲೂಕು ಕಚೇರಿಯಲ್ಲಿ ರೆಕಾರ್ಡ್ ರೂಂನಲ್ಲಿ ಭೂ ಸುರಕ್ಷಾ ಯೋಜನೆ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರು ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ ಎಂದರು.
ಅನೇಕ ಕಡೆ ಭ್ರಷ್ಟರು ಒಟ್ಟಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಮಧ್ಯವರ್ತಿಗಳು, ಏಜೆಂಟರು ಸಹ ಮುಗ್ದ ಜನರಿಗೆ ದಾಖಲೆ ಮಾಡಿಕೊಡುವುದಾಗಿ ಹೇಳಿ ಲಂಚ ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ರೈತರಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ಕಂಪ್ಯೂಟರೀಕರಣ ಮಾಡಲಾಗಿದೆ. ಇನ್ನುಮುಂದೆ ದಾಖಲೆಗಳನ್ನು ತಿದ್ದಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಭೂ ಸುರಕ್ಷಾ ಯೋಜನೆಯ ಕೊಠಡಿಯೊಳಗೆ ಸಂಬಂಧಪಟ್ಟ ಅಧಿಕಾರಿ ಬಿಟ್ಟರೆ ಬೇರೆಯವರಿಗೆ ಪ್ರವೇಶ ನೀಡಬಾರದು. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ ಕಂದಾಯ ಮಂತ್ರಿಗಳ ಕನಸು ನನಸಾಗುತ್ತದೆ ಎಂದು ಹೇಳಿದರು.
ನಾಲ್ಕು ವರ್ಷದಿಂದ ಹಕ್ಕುಪತ್ರ ನೀಡಲು ತಾಂತ್ರಿಕ ಕಾರಣದಿಂದ ಸಾಧ್ಯವಾಗಿರಲಿಲ್ಲ. ನಗರ ವ್ಯಾಪ್ತಿ ಹಾಗೂ ಗ್ರಾಮೀಣ ಭಾಗದಲ್ಲಿ ಹಕ್ಕುಪತ್ರ ನೀಡುವುದು ಸಮಸ್ಯೆಯಾಗಿತ್ತು. ಈಗ ಪರಿಹಾರ ಕಂಡುಕೊಂಡಿದ್ದೇವೆ. ಹಿಳುವಳ್ಳಿ ಗ್ರಾಮದ 6 ಫಲಾನುಭವಿಗಳಿಗೆ 94 ಸಿ ಯಡಿ ಹಕ್ಕುಪತ್ರ ನೀಡಿದ್ದೇವೆ. ನಗರ ವ್ಯಾಪ್ತಿಯಲ್ಲೂ ಸರ್ಕಾರಿ ಜಮೀನು ಇದ್ದು ಇದನ್ನು ಸರ್ವೇ ಮಾಡಿಸಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಪಪಂ ಸದಸ್ಯೆ ಜುಬೇದಾ, ಗ್ರಾಪಂ ಸದಸ್ಯರಾದ ಸುನೀಲ್‌ಕುಮಾರ್, ಕೆ.ಗಂಗಾಧರ್, ಬಿನು,ನರೇಂದ್ರ, ಮುಖಂಡರಾದ ಪಿ.ಆರ್.ಸದಾಶಿವ, ಕೆ.ಎಂ.ಸುಂದರೇಶ್, ಸಾಜು, ಕೆ.ಎ.ಅಬೂಬಕರ್, ಬಿ.ಎಸ್.ಸುಬ್ರಹ್ಮಣ್ಯ ಇತರರಿದ್ದರು.