ಭೂ ದರ ನಿಗದಿ ವಿರೋಧಿಸಿ ರೈತರ ಪ್ರತಿಭಟನೆ : ನಾಲ್ಕು ಗ್ರಾಮಗಳ ಜಮೀನಿಗೆ ಒಂದೊಂದು ಬಗೆಯ ಬೆಲೆ ನಿಗದಿ

fa97160c-84ff-470d-b94a-708a79c19116
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭೂ ಸ್ವಾಧೀನ ಸಲಹಾ ಸಮಿತಿ ಸಭೆಯ ಭೂ ದರ ನಿಗದಿ ವಿರೋಧಿಸಿ ನೂರಾರು ರೈತರು ದೇವನಹಳ್ಳಿ ತಾಲೂಕು ಚಪ್ಪರದಕಲ್ಲಿನ ಜಿಲ್ಲಾಡಳಿತಭವನದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮಾಂತರ ಜಿಲ್ಲೆಯ ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಹಾಗೂ ಬೈರದೇವನಹಳ್ಳಿ ಗ್ರಾಮ ವ್ಯಾಪ್ತಿಯ ಸುಮಾರು 867 ಎಕರೆಯಷ್ಟು ಜಮೀನನ್ನು ರಾಜ್ಯ ಕೈಗಾರಿಕೋದ್ಯಮ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಗೆ ನೀಡಬೇಕೆಂಬ ಸಲಹೆ ಅವೈಜ್ಞಾನಿಕವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಭೂಮಿ ದರ ತೃಪ್ತಿ ತಂದಿಲ್ಲ: ಇಷ್ಟು ಎಕರೆ ಪ್ರದೇಶವನ್ನು ಕೆಐಎಡಿಬಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ನೇತೃತ್ವದಲ್ಲಿ ನಡೆದ ಭೂಸ್ವಾಧೀನ ಸಲಹಾ ಸಮಿತಿ ಸಭೆಯಲ್ಲಿ ತಿಳಿಸಲಾಗಿದೆ, ಆದರೆ ಈ ಸಭೆಯಲ್ಲಿ ನಿರ್ಧರಿಸಿದ ಭೂಮಿಯ ದರ ರೈತರಿಗೆ ತೃಪ್ತಿಯಾಗುವ ರೀತಿ ಇಲ್ಲ. ಈ ಕೂಡಲೇ ಮರುಪರಿಶೀಲನೆ ನಡೆಸಬೇಕು, ರೈತರಿಗೆ ಅನ್ಯಾಯವಾಗದಂತೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಭೂಮಿ ನೀಡಲ್ಲ: ಕುಂದಾಣ ಹೋಬಳಿಯ 867 ಎಕರೆ ಜಮೀನನ್ನು ಯಾವುದೇ ಕಾರಣಕ್ಕೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ. ಅಧಿಕಾರಿಗಳು ಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಪ್ರತಿಭಟನೆ ಸಾಂಕೇತಿಕವಾಗಿದೆ, ಈ ಪ್ರತಿಭಟನೆ ಮೂಲಕ ಭೂಸ್ವಾಧೀನ ಸಲಹಾ ಸಮಿತಿ ಸಭೆ ಸಲಹೆ ಸೂಕ್ತವಾಗಿಲ್ಲ ಎಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತರು ಹೇಳಿದರು.
ಒಂದೊಂದು ದರ ಸಮಂಜಸವಲ್ಲ: ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರುವ ಈ ನಾಲ್ಕೂ ಗ್ರಾಮಗಳ ಜಮೀನಿಗೂ ಒಂದೊಂದು ಬಗೆಯ ದರ ನಿಗದಿ ಮಾಡಲಾಗಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಇದು ರೈತರ ನಡುವೆ ಒಡಕು ಮೂಡಿಸುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಮಿತಿಯ ಸಲಹೆಯನ್ನು ಈ ಭಾಗದ ಭಾಗಶಃ ರೈತರು ವಿರೋಧಿಸುತ್ತಿದ್ದಾರೆ. ಈಗಾಗಲೇ ಇದನ್ನು ವಿರೋಧಿಸಿ 270 ದಿನಗಳ ಕಾಲ ಚನ್ನರಾಯಪಟ್ಟಣ ಹೋಬಳಿ ರೈತರು ನಿರಂತರ ಹೋರಾಟ ಮಾಡಿದ್ದಾರೆ. 2010 ರಿಂದ ಈ ಸಮಿತಿಯು ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿತ್ತು, ಅಂದೇ ಸಭೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗಿತ್ತು, ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಈಗ ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾತಿಗೆ ತಪ್ಪಿದ ಸರ್ಕಾರ: ಈ ಹಿಂದೆ ಭೂಸ್ವಾಧೀನ ನೀತಿ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆಗ ಮಧ್ಯೆ ಪ್ರವೇಶಿಸಿದ್ದ ಸರ್ಕಾರ ಈ ಸಲಹಾ ಸಮಿತಿ ಬಗ್ಗೆ ಶೇ.50 ರೈತರ ಸಮ್ಮಿತಿ ಇದ್ದರೆ ಮಾತ್ರ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿತ್ತು. ಆದರೆ ಇದಕ್ಕೆ ಶೇ.90 ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈಗ ಮತ್ತೆ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ದೂರಿದರು.

ಮಾತಿನ ಚಕಮಕಿ: ಜಿಲ್ಲಾಡಳಿತಭವನ ಅವರಣದಲ್ಲಿ ಜಮಾಯಿಸಿದ್ದ ನೂರಾರು ರೈತರು ಅಧಿಕಾರಿಗಳ ವಿರುದ್ಧ, ಸರ್ಕಾರದ ವಿರುದ್ಧ ೋಷಣೆ ಕೂಗಿದರು. ಈ ವೇಳೆ ಕೆಲವು ರೈತರು ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಹೋದಾಗ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಕಾರರನ್ನು ಸಂಭಾಳಿಸಲು ಪೊಲೀಸರು ಬೆವರು ಹರಿಸಬೇಕಾಯಿತು.

ಪ್ರತಿಕ್ರಿಯೆಗೆ ಸಿಗದ ಜಿಲ್ಲಾಧಿಕಾರಿ: ಪ್ರತಿಭಟನಕಾರರು ಸಮಿತಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ರೈತ ಮುಖಂಡರು ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು. ಆದರೆ ತುರ್ತು ಕೆಲಸದ ಮೇಲೆ ಹೊರಟ ಡಿಸಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net