

ಮೈಸೂರು: ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ವಿನಾಯಿತಿ ನೀಡಲಾಗುವುದು. ನಗರ ಪ್ರದೇಶದ ಪ್ರಕರಣಗಳ ವಿಷಯದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂದಾಯ ಇಲಾಖೆ ಅಧಿಕಾರಿಗಳೇ ವ್ಯಾಜ್ಯ ಬಗೆಹರಿಸಲಿದ್ದಾರೆ. ವಿಧಾನಮಂಡಲ ಅಧಿವೇಶನದಲ್ಲಿ 7ರಿಂದ 8 ಕಾಯ್ದೆಗಳಿಗೆ ಅನುಮೋದನೆ ಪಡೆಯಲು ಚಿಂತನೆ ನಡೆಸಿದ್ದೇವೆ ಎಂದರು.
ನಿಯಮ ಉಲ್ಲಂಘಿಸಿ ಕಟ್ಟಿದ ಮನೆಗಳಿಗೆ ವಿದ್ಯುತ್, ನೀರಿನ ಸಂಪರ್ಕ ಕೊಡಬಾರದು ಎಂಬ ನಿಯಮವಿದೆ. ವಾಸಕ್ಕೆ ಮನೆ ಕಟ್ಟಿಕೊಂಡವರಿಗೆ ಮೂಲಸೌಕರ್ಯ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಅನಧಿಕೃತವಾಗಿ ನಿರ್ಮಿಸಿದ ಮನೆಗಳಿಗೂ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಲಾಗುವುದು. ಆದ್ದರಿಂದ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಈ ಕುರಿತು ಅಧಿವೇಶನದಲ್ಲೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಕೆರೆಗಳು ಕೋಡಿ ಬೀಳುತ್ತಿರುವುದು ಸಂತೋಷದ ಬೆಳವಣಿಗೆ. ಜತೆಗೆ ಅಲ್ಲಲ್ಲಿ ಗ್ರಾಮಗಳು, ಜನವಸತಿಗಳು ಹಾಗೂ ಜಮೀನುಗಳು ಜಲಾವೃತವಾಗುತ್ತಿವೆ. ಒತ್ತುವರಿ ಪರಿಣಾಮವಾಗಿ ಜನಜೀವನಕ್ಕೆ ತೊಂದರೆ ಆಗುತ್ತಿದೆ. ಅತಿಕ್ರಮಣ ತೆರವುಗೊಳಿಸಿದರೆ ಹಲವು ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಅಷ್ಟೇನೂ ಹಾನಿಯಾಗಿಲ್ಲ. ಸಮಸ್ಯೆ ಉಂಟಾದರೆ ಸಾಕಷ್ಟು ಹಣವಿದ್ದು ತಕ್ಷಣ ಸ್ಪಂದಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಾನೂನು ಹೋರಾಟ
ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಾವು ಸಮರ್ಥವಾಗಿ ವಾದ ಮಂಡಿಸಲಿದ್ದೇವೆ. ಮಹಾಜನ್ ವರದಿ ಜಾರಿಗೊಳಿಸಿದಾಗ ನಮಗೆ ತೃಪ್ತಿ ಇರಲಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಅಭಿಪ್ರಾಯ ಇತ್ತು. ಆದರೂ ಆ ವರದಿ ಒಪ್ಪಿಕೊಂಡಿದ್ದೇವೆ. ಮತ್ತೆ ಅದನ್ನು ತಿದ್ದುಪಡಿ ಮಾಡುವುದರಲ್ಲಿ ಅರ್ಥವಿಲ್ಲ. ನಾವು ಕಾನೂನು ಹೋರಾಟಕ್ಕೆ ಸಿದ್ಧವಾಗಿಲ್ಲ ಎನ್ನುವುದು ಸುಳ್ಳು. ಈಗಾಗಲೇ ಪರಿಣತ ವಕೀಲರ ತಂಡ ರಚಿಸಿದ್ದೇವೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.