ಭೂ-ಕಬಳಿಕೆ ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧವೂ ಪ್ರಕರಣ

Bhu Kabalike
Published on

ಚಿತ್ರದುರ್ಗ: ಭೂ ಕಬಳಿಕೆಯ ಕುರಿತು ಮಾಹಿತಿ ಬಂದರೂ ಕ್ರಮ ಕೈಗೊಳ್ಳದೆ, ನಿರ್ಲಕ್ಷೆ ತೋರುವ ಅಧಿಕಾರಿಗಳ ವಿರುದ್ಧವೂ ಭೂ ಒತ್ತುವರಿಗೆ ಪ್ರೋತ್ಸಾಹಿಸಿದ್ದಾರೆಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ, ನ್ಯಾಯಮೂರ್ತಿ ಬಿ.ಎ.ಪಾಟೀಲ್ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ವಿವಿಧೆಡೆ ಸ್ಮಶಾನ, ಭವನ ನಿರ್ಮಾಣ, ರಸ್ತೆ ವಿಸ್ತರಣೆ, ವಾಹನ ನಿಲುಗಡೆ ಸೇರಿ ಸಾರ್ವಜನಿಕ ಉಪಯೋಗಕ್ಕೆ ಜಾಗಬೇಕೆಂದರೆ, ಸರ್ಕಾರ ಕೋಟಿಗಟ್ಟಲೇ ಹಣ ನೀಡಿ ಭೂಮಿ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೂ ಒಂದು ರೀತಿ ಕಾರಣ ಎಂದು ಬೇಸರಿಸಿದರು.

ಅಧಿನಿಯಮ ಬಲಿಷ್ಠ, ಪರಿಣಾಮಕಾರಿಯಾಗಿದ್ದು, ಅಧಿಕಾರಿಗಳು ಕಾಯ್ದೆ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು, ಸರ್ಕಾರಿ ಭೂಮಿಯ ರಕ್ಷಣೆಗೆ ಕಾರ್ಯ ಪ್ರವೃತ್ತರಾಗಿ. ಒತ್ತುವರಿ ಗಮನಕ್ಕೆ ಬಂದೊಡನೆ, ವಿಶೇಷ ನ್ಯಾಯಾಲಯಕ್ಕೆ ಫಾರಂ ‘1’ ರಲ್ಲಿ ಅರ್ಜಿ ಸಲ್ಲಿಸಿದರೆ ಸಾಕು, ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಒತ್ತಡ ಹಾಗೂ ಪ್ರಭಾವಕ್ಕೆ ಮಣಿಯುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.

ವಿಶೇಷ ನ್ಯಾಯಾಲಯ ಮಾಧ್ಯಮಗಳ ವರದಿ ಆಧರಿಸಿ ಸಾಕಷ್ಟು ಪ್ರಕರಣ ದಾಖಲಿಸಿಕೊಂಡಿದೆ. ಹೀಗೆ ದಾಖಲಾದ ಹಲವು ಪ್ರಕರಣಗಳಲ್ಲಿ ಭೂ ಒತ್ತುವರಿ ಕೂಡ ತೆರವುಗೊಳಿಸಲಾಗಿದೆ. ಭೂ ಕಬಳಿಕೆ ತಡೆಯುವಲ್ಲಿ ತಹಸೀಲ್ದಾರರ ಪಾತ್ರ ದೊಡ್ಡದಿದ್ದು, ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕೆರೆಗಳ ಸರಹದ್ದುಗಳನ್ನು ಗುರುತಿಸಿ ಏರಿಗಳನ್ನು ನಿರ್ಮಿಸುವ ಮೂಲಕ, ಒತ್ತುವರಿ ತೆರವಿಗೆ ಅಧಿಕಾರಿಗಳು ಪ್ರಯತ್ನಿಸಬೇಕು. ಭೂ ಪರಿವರ್ತನೆ ನೀಡುವ ಪ್ರಾಧಿಕಾರಗಳು ಕೆರೆ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಕುರಿತು ಪರಿಶೀಲಿಸಿದ ನಂತರ ಅನುಮತಿ ನೀಡಬೇಕು ಎಂದು ತಾಕೀತು ಮಾಡಿದರು.

ನ್ಯಾಯಾಂಗ, ಕಂದಾಯ, ಭೂ ಸರ್ವೇ, ಪೊಲೀಸ್, ಅರಣ್ಯ ಇಲಾಖೆ ಜಂಟಿಯಾಗಿ ಬಿಗಿ ಮುಷ್ಠಿಯಿಂದ ಸರ್ಕಾರಿ ಭೂಮಿಯನ್ನು ರಕ್ಷಿಸಿದರೆ, ಎಂತಹ ವ್ಯಕ್ತಿ ಅಥವಾ ಸಮೂಹಗಳಿಂದಲೂ ಭೂ ಕಬಳಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ್ ವಾಸುದೇವ್ ಮಾತನಾಡಿ, ಕೆರೆ, ಅರಣ್ಯ ಹಾಗೂ ಕಂದಾಯ ಭೂಮಿ ಒತ್ತುವರಿ ಮಾಡಿ ದುರ್ಲಾಭ ಪಡೆಯುತ್ತಿರುವ ಪಟ್ಟಭದ್ರ ಹಿತಾಸಕ್ತರನ್ನು ಕಾನೂನಿನ ಚೌಕಟ್ಟಿಗೆ ತರುವ ಕೆಲಸ ಮಾಡಬೇಕು. ಅತಿಕ್ರಮಣ ತೆರವುಗೊಳಿಸಿ ಸರ್ಕಾರಕ್ಕೆ ಆಸ್ತಿ ಮರಳಿಸಬೇಕು ಎಂದು ಸಲಹೆ ನೀಡಿದರು.

ಮಾಧ್ಯಮಗಳು ಕೂಡ ಸರ್ಕಾರಿ ಭೂ ಕಬಳಿಕೆ ಕುರಿತು ವಿಸ್ತೃತ ವರದಿ ಪ್ರಕಟಿಸುವ ಮೂಲಕ ನ್ಯಾಯಾಲಯಗಳ ಗಮನ ಸೆಳೆಯಬೇಕು. ಇದನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿ, ಸರ್ಕಾರಿ ಭೂಮಿ ರಕ್ಷಿಸಲು ಸಹಕಾರಿಯಾಗಲಿದೆ ಎಂದರು.

ಜಿಲ್ಲೆ ಬರಪೀಡಿತ ಪ್ರದೇಶವಾಗಿದ್ದು, ಕೆರೆಗಳ ಒತ್ತುವರಿ ಮೋಜಿಣಿ ಮಾಡುವುದು ಅಗತ್ಯವಿದೆ. ನಿರ್ವಹಣೆ ಸಮಿತಿ ಅಧ್ಯಕ್ಷನಾಗಿ ಸದ್ಯದಲ್ಲೇ ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ ಕೆ.ಜಯಪ್ರಕಾಶ್, ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಲಯದ ಕಂದಾಯ ಸದಸ್ಯರಾದ ಎಸ್.ಪಾಲಯ್ಯ, ಕೆ.ಎಚ್.ಅಶ್ವತ್ಥನಾರಾಯಣ ಗೌಡ, ವಿಲೇಖನಾಧಿಕಾರಿ ಎಚ್.ಕೆ.ನವೀನ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಕುಮಾರಸ್ವಾಮಿ, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಎಸಿ ಎಂ.ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net