

ಸಾಗರ: ಕೆಪಿಸಿ ಮತ್ತು ಕಂದಾಯ ಇಲಾಖೆಯ ನೂರಾರು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವ ಮಲ್ಲಿಕಾರ್ಜುನ ಹಕ್ರೆ ಕಾಂಗ್ರೆಸ್‌ಗೆ ಬುದ್ಧಿ ಹೇಳುವ ಅಗತ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ತಿರುಗೇಟು ನೀಡಿದ್ದಾರೆ.
ತಾವೊಬ್ಬ ಸಂಭಾವಿತ ಎನ್ನುವಂತೆ ಮಲ್ಲಿಕಾರ್ಜುನ ಹಕ್ರೆ ಮಾತನಾಡುತ್ತಾರೆ. ಅವರು ಬಗರ್‌ಹುಕುಂ ಹೆಸರಿನಲ್ಲಿ ಭೂಒತ್ತುವರಿ ಮಾಡಿರುವ ದಾಖಲೆಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ತಾಪಂ ಇಒ ಕರೆದ ಸಭೆಗೆ ಹೋಗಿ ಶಾಸಕರ ಆದೇಶದಂತೆ ಕೆಲವು ಸಲಹೆಗಳನ್ನು ನೀಡಿದ್ದಾರೆಯೇ ವಿನಃ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿಲ್ಲ. ಶಾಸಕರು ತಮ್ಮ ಮೊಮ್ಮಗಳನ್ನು ನೋಡಲು ವಿದೇಶಕ್ಕೆ ಹೋಗಿದ್ದಾರೆಯೇ ವಿನಃ ಯಾವುದೇ ಬಂಡವಾಳ ತೊಡಗಿಸಲು ಅಲ್ಲ. ಮಳೆಹಾನಿ ಸಂದರ್ಭ ನಮ್ಮ ತಂಡ ಶಾಸಕರ ಸೂಚನೆ ಮೇರೆಗೆ ತೆರಳಿ ಕೈಲಾದ ಸಹಾಯ ಮಾಡಿದ್ದೇವೆ. ಮಾಜಿ ಶಾಸಕರು, ಮಲ್ಲಿಕಾರ್ಜುನ ಹಕ್ರೆ ಎಷ್ಟು ಕಡೆ ಭೇಟಿ ಕೊಟ್ಟಿದ್ದಾರೆ? ವೈಯಕ್ತಿಕವಾಗಿ ಎಷ್ಟು ಸಹಾಯ ಮಾಡಿದ್ದಾರೆ ಎನ್ನುವುದನ್ನು ಹೇಳಲಿ ಎಂದು ಸವಾಲೆಸೆದರು.
ಕರೂರು ಭಾಗದಲ್ಲಿ ಅರಣ್ಯ ಇಲಾಖೆ ನೌಕರರು ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದನ್ನು ಕಾಂಗ್ರೆಸ್ ಖಂಡಿಸುತ್ತದೆ. ಹಲ್ಲೆ ಮಾಡಿರುವುದು ಗೊತ್ತಾದ ತಕ್ಷಣ ಕಾಂಗ್ರೆಸ್ ಪ್ರಮುಖರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ದೂರು ನೀಡಲು ತಿಳಿಸಿದ್ದೇವೆ. ಶಾಸಕರು ಊರಿನಲ್ಲಿದ್ದರೂ ಇದರ ಬಗ್ಗೆ ಮಂಜುನಾಥ್ ಯಾವುದೇ ಮಾಹಿತಿ ನೀಡಿಲ್ಲ. ಮಂಗಳವಾರ ಸಾಗರ ಆಸ್ಪತ್ರೆಗೆ ಬಂದಾಗ ಸಹ ಅವರಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ದೇವೆ. ಮಂಜುನಾಥ್ ಮೇಲೆ ಹಲ್ಲೆ ಮಾಡಿದವರನ್ನು ಅಮಾನತು ಮಾಡಲು ನಮ್ಮದೂ ಒತ್ತಾಯವಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವರು, ಜಿಲ್ಲಾಕಾರಿಗೆ ಶಾಸಕರು ಪತ್ರ ಬರೆದಿದ್ದಾರೆ. ವೆಂಕಟೇಶ್ ಕೊಲೆ ಪ್ರಕರಣದಲ್ಲಿ ಸಹ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ತೆಗೆದುಕೊಳ್ಳಲು ಶಾಸಕರು ತಿಳಿಸಿದ್ದಾರೆ. ಆದರೆ ಮಲ್ಲಿಕಾರ್ಜುನ ಹಕ್ರೆ ಅವರು ಶಾಸಕರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದ್ದಾರೆ ಎಂದರು.
ಸಾಗರ ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶಬಾಬು ಮಾತನಾಡಿ, ಅಕೃತ ಸರ್ಕಾರಿ ಆದೇಶದ ಮೇರೆಗೆ ಶ್ರೀನಿವಾಸಮೂರ್ತಿ ಅವರು ಶಾಸಕರ ಆಪ್ತ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಶಾಸಕರ ಆಪ್ತ ಕಾರ್ಯದರ್ಶಿ ಬಳಿ ಮಲ್ಲಕಾರ್ಜುನ ಹಕ್ರೆ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.
ಕೆ.ಹೊಳೆಯಪ್ಪ, ಗಣಪತಿ, ಚೇತನರಾಜ್, ಸಂತೋಷ್, ರವಿ, ಜಾಕೀರ್, ಗಿರೀಶ್ ಕೋವಿ, ಕನ್ನಪ್ಪ, ಡಿ.ದಿನೇಶ್, ಸದ್ದಾಂ, ಮೈಕಲ್ ಡಿಸೋಜ, ಎನ್.ಲಲಿತಮ್ಮ, ಪ್ರಭಾವತಿ, ಉಷಾ ಸುದ್ದಿಗೋಷ್ಠಿಯಲ್ಲಿದ್ದರು.