

ಕೆ.ಆರ್.ನಗರ : ಕರೊನಾ ಸಂದರ್ಭದಲ್ಲಿ ಉಂಟಾದ ನಷ್ಟವನ್ನು ಬರಿಸಲು ನನಗೆ ಅವಕಾಶ ಕೊಡಿಸುವಂತೆ ನ್ಯಾಯಾಲಯದಲ್ಲಿ ಕೆವಿಯಟ್ ಹಾಕಿದ್ದರೂ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯವರು ನನಗೆ ತೊಂದರೆ ಕೊಡುತ್ತಿದ್ದು, ನ್ಯಾಯಾಲಯದಲ್ಲಿ ಪ್ರಕರಣ ತೀರ್ಮಾನವಾಗುವವರಿಗೆ ಕಾಲಾವಕಾಶ ಕೊಡುವಂತೆ ರೈತ ಸಮುದಾಯ ಭವನ ಒಡಂಬಡಿಕೆ ಮಾಡಿಕೊಂಡಿದ್ದ ಗುತ್ತಿಗೆದಾರ ಗಣೇಶ್ ಆಚಾರ್ ಮನವಿ ಮಾಡಿದರು.
2018 ರಿಂದ 2023 ರವರಿಗೆ ಐದು ವರ್ಷಗಳ ಕಾಲ ಪ್ರತಿವರ್ಷ 10,70,000 ರೂ. ಗಳಿಗೆ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರು ನನಗೆ ಒಡಂಬಡಿಕೆ ಮಾಡಿಕೊಟ್ಟಿದ್ದರು. ಆದರೆ ಆ ಸಂದರ್ಭದಲ್ಲಿ ಒಂದೊದಗಿದ ಕೊವೀಡ್‌ನಿಂದ ನನಗೆ ಸಾಕಷ್ಟು ನಷ್ಟ ಉಂಟಾಗಿದೆ. ರೈತ ಸಮುದಾಯ ಭವನವನ್ನು ತೆರವು ಮಾಡುವಂತೆ ನನಗೆ ಯಾವುದೇ ನೋಟಿಸ್ ಜಾರಿ ಮಾಡದೆ ಹಾಗೂ ಮಾಹಿತಿಯನ್ನು ನೀಡದೆ ಏಕಾಏಕಿ ಬೀಗ ಜಡಿದಿದ್ದರ ವಿರುದ್ಧವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಪ್ರಕರಣ ತೀರ್ಮಾನವಾಗುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ತಿಳಿಸಿದೆ. ಆದ್ರೂ ಕಾನೂನು ಉಲ್ಲಂಘಿಸಿ ಮತ್ತೆ ರೈತ ಸಮುದಾಯ ಭವನಕ್ಕೆ ಅಕ್ರಮ ಪ್ರವೇಶ ಮಾಡಿ ಬೀಗ ಒಡೆದು ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ನಾನು ನನ್ನ ಕುಟುಂಬದ ನಿರ್ವಹಣೆ ಮಾಡಲು ಸಮುದಾಯ ಭವನವನ್ನು ಗುತ್ತಿಗೆ ಪಡೆದುಕೊಂಡಿದ್ದೆ. ಆದರೆ ಕರೊನಾ ಮಹಾಮಾರಿಯಿಂದ ವಿವಾಹ ಮತ್ತು ಕಾರ್ಯಕ್ರಮಗಳು ನಡೆಯದೇ ಅಪಾರ ನಷ್ಟವಾಗಿದ್ದು ಜೀವನ ಸಾಗಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದೇನೆ. ಇಂತಹ ಸ್ಥಿತಿಯಲ್ಲಿರುವಾಗ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ನನಗೆ ತೊಂದರೆ ನೀಡುತ್ತಿದ್ದಾರೆ. ಶಾಸಕ ಡಿ.ರವಿಶಂಕರ್ ಈ ಬಗ್ಗೆ ಗಮನಹರಿಸಿ ಪಿಎಲ್‌ಡಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕರನ್ನು ಕರೆಯಿಸಿ ನನಗೊಂದು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.