ಭುವನೇಶ್ವರದಲ್ಲಿ ಮೂರು ದಿನಗಳು ಎಐಯುಟಿಯುಸಿ 22ನೇ ಸಮ್ಮೇಳನ

mysore
Published on

ಮೈಸೂರು: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನ (ಎಐಯುಟಿಯುಸಿ) 22ನೇ ಅಖಿಲ ಭಾರತ ಸಮ್ಮೇಳನವನ್ನು ಡಿ.15ರಿಂದ 17ರವರೆಗೆ ಒಡಿಶಾದ ಭುವನೇಶ್ವರದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿವಿಧ ರಾಜ್ಯಗಳ ಸ್ಕೀಮ್ ಕಾರ್ಯಕರ್ತೆಯರು ಸೇರಿದಂತೆ ಸಂಘಟಿತ ಹಾಗೂ ಅಸಂಘಟಿತ ವಲಯಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಮೆರಿಕ ಮತ್ತಿತರ ಸಾಮ್ರಾಜ್ಯಶಾಹಿ ದೇಶಗಳ ಕುಮ್ಮಕ್ಕಿನಿಂದ ಇಸ್ರೇಲ್, ಉಕ್ರೇನ್, ಲೆಬನಾನ್ ಇತ್ಯಾದಿ ದೇಶಗಳ ಮೇಲೆ ಯುದ್ಧ ಜರುಗುತ್ತಿದೆ.

ಜಾಗತಿಕವಾಗಿ ಮಾರುಕಟ್ಟೆ ಹಂಚಿಕೆಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ತಿಕ್ಕಾಟ, ಪೈಪೋಟಿ ತೀವ್ರವಾಗಿದೆ. ದುಡಿಯುವ ಜನರ ಜೀವನ ಹಾಗೂ ಜೀವನೋಪಾಯಗಳ ಮೇಲೆ ಆಳುವ ಬಂಡವಾಳಶಾಹಿ ವರ್ಗ ಮತ್ತದರ ಸರ್ಕಾರಗಳಾದ ಕೇಂದ್ರದ ಬಿಜೆಪಿ ಹಾಗೂ ವಿವಿಧ ರಾಜ್ಯ ಸರ್ಕಾರಗಳು ತೀವ್ರ ದಾಳಿಗಳನ್ನು ಎಸಗುತ್ತಿರುವ ಸಂದರ್ಭದಲ್ಲಿ ಈ ಸಮ್ಮೇಳನ ಜರುಗುತ್ತಿದೆ.

ಜಗತ್ತಿನ ಹಾಗೂ ವಿಶೇಷವಾಗಿ ದೇಶದ ಸಮಸ್ತ ದುಡಿಯುವ ಜನರ ಶೋಚನೀಯ ಪರಿಸ್ಥಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಬಲಿಷ್ಠ ಕಾರ್ಮಿಕ ಚಳವಳಿಯನ್ನು ಕಟ್ಟಲು ನಿರ್ದಿಷ್ಟ ಸಂಘಟನಾತ್ಮಕ ಯೋಜನೆ, ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಂಘಟನೆಯ ಮುಖಂಡ ಚಂದ್ರಶೇಖರ್ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.15ರಂದು ಬಹಿರಂಗ ಅಧಿವೇಶನ ಜರುಗಲಿದ್ದು, ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷ ಕೆ. ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ನಾಯಕರಾದ ಸತ್ಯವಾನ್, ಸ್ವಪನ್ ಘೋಷ್, ಅರುಣ್ ಕುಮಾರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಶಂಕರ್ ದಾಸ್ ಗುಪ್ತ ಮಾತನಾಡಲಿದ್ದಾರೆ.

ಡಿ.15ರಂದು ಸಂಜೆ ಹಾಗೂ ನಂತರದ ಎರಡು ದಿನಗಳ ಕಾಲ ರಾಯಲ್ ರೆಸಾರ್ಟ್ ಆವರಣದಲ್ಲಿ ಪ್ರತಿನಿಧಿ ಅಧಿವೇಶನ ಜರುಗಲಿದ್ದು, ಈ ಅಧಿವೇಶನದಲ್ಲಿ ದುಡಿಯುವ ವರ್ಗದ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದಲ್ಲದೆ, ಆಳುವ ವರ್ಗವು ದೇಶದ ಏಕಸ್ವಾಮ್ಯ ಕಾರ್ಪೊರೇಟ್ ಮನೆತನಗಳ ಹಿತಾಸಕ್ತಿಯಲ್ಲಿ ದೇಶದ ಸಾರ್ವಜನಿಕ ಉದ್ದಿಮೆಗಳ ಸಾರಾಸಗಟಾಗಿ ಖಾಸಗೀಕರಣಗೊಳಿಸುತ್ತಿರುವುದು,

ದುಡಿಯುವ ಜನರ ಹಕ್ಕುಗಳ ಹರಣದ ವಿರುದ್ಧ ಹಾಗೂ ಕನಿಷ್ಠ ವೇತನದ ಹೆಚ್ಚಳ, ಪಿಎಫ್ ಹಾಗೂ ಇಎಸ್‌ಐಗಳಂತಹ ಸಾಮಾಜಿಕ ಭದ್ರತೆ ಬಲಪಡಿಸುವ ಕುರಿತು ಗೊತ್ತುವಳಿ ಕೈಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಕಾರ್ಮಿಕ ವರ್ಗ ಕೈಗೊಳ್ಳಬೇಕಾದ ಚಳವಳಿಯ ಬೇಡಿಕೆಗಳ ಪಟ್ಟಿ (ಚಾರ್ಟರ್ ಆಫ್ ಡಿಮಾಂಡ್ಸ್) ಸಹ ಪ್ರತಿನಿಧಿ ಅಧಿವೇಶನ ರೂಪಿಸಲಿದೆ ಎಂದೂ ತಿಳಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net