ಭೀಮರಥ ಶಾಂತಿ ಮೂಢನಂಬಿಕೆಯಲ್ಲ

16 smg 4
Published on

ಶಿವಮೊಗ್ಗ: ವ್ಯಕ್ತಿ ತನ್ನ 70ನೇ ವರ್ಷದಲ್ಲಿ ಆಚರಿಸಿಕೊಳ್ಳುವ ಭೀಮರಥ ಶಾಂತಿ ಮೂಢನಂಬಿಕೆಯಲ್ಲ. ಅದು ಆಚರಣೆಯ ನಂಬಿಕೆ. ಯಜ್ಞ ಯಾಗಾದಿಗಳು ನಮ್ಮ ಧಾರ್ವಿುಕ ತಳಹದಿಯ ಮೇಲೆ ನಿರ್ವಣಗೊಂಡಿವೆ. ಯಜ್ಞದ ಜ್ವಾಲೆಯಲ್ಲಿ ಜ್ಞಾನ ಅರಳುತ್ತದೆ ಎಂದು ಆರ್​ಎಸ್​ಎಸ್​ನ ಹಿರಿಯ ಕ್ಷೇತ್ರ ಪ್ರಚಾರಕ ಸು.ರಾಮಣ್ಣ ಅಭಿಪ್ರಾಯಪಟ್ಟರು.

ಸಚಿವ ಕೆ.ಎಸ್.ಈಶ್ವರಪ್ಪ ಅವರ ಭೀಮರಥ ಶಾಂತಿ ಅಂಗವಾಗಿ ಭಾನುವಾರ ಶಿವಮೊಗ್ಗದ ಅವರ ನಿವಾಸದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಕೆಲವರು ನಮ್ಮ ಆಚರಣೆಗಳ ಬಗ್ಗೆ ಅಪಸ್ವರ ವ್ಯಕ್ತಪಡಿಸುತ್ತಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಮನೋಧರ್ಮವಿದೆ. ಅದು ನಮ್ಮ ಸಂಸ್ಕೃತಿ ಹಾಗೂ ಧಾರ್ವಿುಕತೆಯ ಶಕ್ತಿಯೂ ಹೌದು ಎಂದರು.

ಈಶ್ವರಪ್ಪ ಉತ್ತಮ ಜೀವನ ಪದ್ಧತಿ ರೂಢಿಸಿಕೊಂಡವರು. ಯಾವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಜಾತಿಯವರಲ್ಲೂ ಉತ್ತಮ ಬಾಂಧವ್ಯ ರೂಢಿಸಿಕೊಂಡಿದ್ದಾರೆ. ಜೀವನದಲ್ಲಿ ಬದ್ಧತೆ, ತ್ಯಾಗ ಗುಣ, ತತ್ವ ಹಾಗೂ ಸಿದ್ಧಾಂತಗಳನ್ನು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.

ನಡೆ-ನುಡಿ ಸೂಕ್ಷ್ಮವಾದುದು: ಈಶ್ವರಪ್ಪ ಅವರ ನಡೆ ಹಾಗೂ ನುಡಿಯಲ್ಲಿ ಸೂಕ್ಷ್ಮತೆಯಿದೆ. ಈ ವಿಷಯದಲ್ಲಿ ಎಂದೂ ಅವರು ವಿಕೃತಿ ತೋರಿದವರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

ನಾನು ಹಲವು ವರ್ಷಗಳ ಕಾಲ ಅವರೊಂದಿಗೆ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಸಂಘಟನೆ ವಿಷಯದಲ್ಲಿ ಯಾರಾದರೂ ತಪ್ಪು ಮಾಡಿದರೆ ಈಶ್ವರಪ್ಪ, ಆ ತಪ್ಪನ್ನು ದೊಡ್ಡದಾಗಿ ಬಿಂಬಿಸುತ್ತಿರಲಿಲ್ಲ. ಬದಲಿಗೆ ತಪ್ಪೆಸಗಿದ ವ್ಯಕ್ತಿಯ ಬೆನ್ನಿಗೆ ನಿಂತು ಆತನಿಗೆ ಧೈರ್ಯ ತುಂಬುತ್ತಿದ್ದರು. ಅವರು ಯಾವುದೇ ಧರ್ಮ, ಜಾತಿಗೆ ಸೀಮಿತರಾದವರಲ್ಲ ಎಂದು ಹೇಳಿದರು.

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ, ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಈಶ್ವರಪ್ಪ ಅವರನ್ನು ಆಶೀರ್ವದಿಸಿದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮುಂತಾದವರು ಭಾಗವಹಿಸಿ ಈಶ್ವರಪ್ಪ-ಜಯಲಕ್ಷ್ಮೀ ದಂಪತಿಗೆ ಶುಭ ಹಾರೈಸಿದರು.

ವಿಶೇಷ ಆಶೀರ್ವಾದ: ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಕೆ.ಎಸ್.ಈಶ್ವರಪ್ಪ-ಜಯಲಕ್ಷ್ಮೀ ದಂಪತಿಗೆ ಕಂಬಳಿ ಹೊದಿಸಿ ವಿಶೇಷವಾಗಿ ಆಶೀರ್ವದಿಸಿದರು. ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕೃಷ್ಣನ ಮೂರ್ತಿ ನೀಡಿದರೆ, ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಬುದ್ಧನ ಪುತ್ಥಳಿ ನೀಡಿ ಹರಸಿದರು.

ಆರ್​ಎಸ್​ಎಸ್ ಯೂನಿವರ್ಸಿಟಿ: ಶಿಸ್ತು, ಬದ್ಧತೆ, ಸಮಯಪಾಲನೆಯನ್ನು ಕಲಿಯಲು ಆರ್​ಎಸ್​ಎಸ್ ಕಾರ್ಯಕರ್ತರನ್ನು ಗಮನಿಸಬೇಕು. ಒಂದರ್ಥದಲ್ಲಿ ಆರ್​ಎಸ್​ಎಸ್ ಯೂನಿವರ್ಸಿಟಿಯಂತೆ ಎಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ್ ಗುರೂಜಿ ಹೇಳಿದರು. ಬ್ಯಾಗ್​ನಲ್ಲಿ ಒಂದು ಜೊತೆ ವಸ್ತ್ರ ಇಟ್ಟುಕೊಂಡು ಸಂಚಾರ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿ, ದೇಶಭಕ್ತಿ ಸಾರುವ ಸ್ವಯಂ ಸೇವಕರು, ಗೋ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಎಲ್ಲರೂ ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಸೇರಿರುವ ಜನರನ್ನು ಗಮನಿಸಿದರೆ ಸಚಿವ ಈಶ್ವರಪ್ಪ ಅವರಿಗೆ ಜನರ ಅವಾರ್ಡ್ ಸಿಕ್ಕಿರುವುದು ನಿಶ್ಚಿತ ಎಂದರು.

ಧರ್ಮ ನಿಷ್ಠರು: ಸಚಿವ ಕೆ.ಎಸ್.ಈಶ್ವರಪ್ಪ ಅವರು ಧರ್ಮ ನಿಷ್ಠರು. ಜಾತಿ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇಲ್ಲ. ಒಮ್ಮೆ ಅವರ ಮಾತುಗಳು ಕಠೋರ ಎನಿಸಿದರೂ ಅವು ವಾಸ್ತವಕ್ಕೆ ತೀರಾ ಸಮೀಪವಿರುತ್ತದೆ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು. ಮಾಧ್ಯಮಗಳಲ್ಲಿ ಈಶ್ವರಪ್ಪ ಅವರನ್ನು ಗಮನಿಸಿದವರು, ಅವರ ಮಾತುಗಳನ್ನು ಕೇಳಿದವರು ಈ ವ್ಯಕ್ತಿ ಅದೆಷ್ಟು ಕಠಿಣ ವ್ಯಕ್ತಿತ್ವ ಹೊಂದಿದ್ದಾರೆಂದೇ ಭಾವಿಸುತ್ತಾರೆ. ವಾಸ್ತವದಲ್ಲಿ ಈಶ್ವರಪ್ಪ ಅವರದ್ದು ಮಗುವಿನ ಹೃದಯ. 7 ದಶಕಗಳ ಜೀವನದಲ್ಲಿ ಇವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನೂ ಹೆಚ್ಚಿನ ಅಧಿಕಾರ ಭಾಗ್ಯ ಸಿಗಲೆಂಬುದು ನಮ್ಮ ಆಶಯ ಎಂದರು.

ಸರ್ಕಾರಿ ಶಾಲೆಗಳಿಗೆ ಕೊಡುಗೆ: 70ನೇ ಜನ್ಮದಿನದ ಅಂಗವಾಗಿ ಸಚಿವ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ನಗರದ ಎರಡು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅವುಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಭೀಮರಥ ಶಾಂತಿ ಸಂದರ್ಭದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆ ಎರಡು ಸರ್ಕಾರಿ ಶಾಲೆಗಳಿಗೆ ಬಿಸಿಯೂಟಕ್ಕೆ ಅನುಕೂಲವಾಗುವಂತೆ ಮಿಕ್ಸರ್, ಗ್ರೖೆಂಡರ್, ಕುಕ್ಕರ್​ಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net