ಭೀಮನಮವಾಸೆಗಿಂತ ಕಿಟ್ಟಿ ಪಾರ್ಟಿಯ ಸಂಸ್ಕೃತಿ ಹೆಚ್ಚಾಗಿದೆ:ವಿನಯ್ ಗುರೂಜಿ

ಭೀಮನಮವಾಸೆಗಿಂತ  ಕಿಟ್ಟಿ ಪಾರ್ಟಿಯ ಸಂಸ್ಕೃತಿ ಹೆಚ್ಚಾಗಿದೆ:ವಿನಯ್ ಗುರೂಜಿ
Published on

ಹಾಸನ: ಪ್ರತಿಯೊಬ್ಬರು ನಮ್ಮ ಜೀವನವನ್ನು ಅರ್ಥಪೂರ್ಣವಾಗಿ ಬದುಕುವ ಮೂಲಕ ಮತ್ತೊಬ್ಬರಿಗೆ ಒಳ್ಳೆಯ ಪಾಠವಾಗಬೇಕೆ ಹೊರತು ವರ್ಷಕ್ಕೊಮ್ಮೆ ಬರುವ ಭೀಮನಮವಾಸೆಗಿಂತ ನಗರದಲ್ಲಿ ಕಿಟ್ಟಿ ಪಾರ್ಟಿಯ ಸಂಸ್ಕೃತಿಯನ್ನು ಬೆಳಸಿಕೊಳ್ಳವಾರದು ಎಂದು ಅವದೂತ ವಿನಯ್ ಗುರೂಜಿ ಕಿವಿ ಮಾತು ಹೇಳಿದರು.

ನಗರದ ರಿಂಗ್ ರಸ್ತೆಯ ತನ್ವೀತ್ರಿಶಾ ಕಲ್ಯಾಣ ಮಂಟಪದ ಬಳಿ ಇರುವ ಕರಿಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ್ಸ್‌ ಶಾಪ್ ಬಳಿ ಪರಮ ಪೂಜ್ಯ ಅವದೂತ ಶ್ರೀ ವಿನಯ್ ಗುರೂಜಿಯವರ ಹುಟ್ಟುಹಬ್ಬ ಆಚರಣಾ ಸಮಿತಿಯಿಂದ ಭಾನುವಾರ ಅವರ ಜನ್ಮದಿನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಶ್ಚತ್ಯ ಜೀವನಕ್ಕೆ ಹೆಚ್ಚು ಮಾರುಹೋಗುತ್ತಿರುವುದರಿಂದ ನಮ್ಮ ಸಂಸ್ಕೃತಿ ಕಲೆ ಆಚಾರ ವಿಚಾರಗಳನ್ನು ನಶಿಸಿ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆ ಒಂದು ವಿಶಿಷ್ಟವಾದಂತಹ ಸ್ಥಾನವನ್ನು ಪಡೆದುಕೊಂಡಿದೆ ಇಲ್ಲಿ ಹಾಸನಾಂಬೆ ದೇವಿ ನೆಲೆಸಿದ್ದು, ಆ ಜಾಗದಲ್ಲಿ ನನ್ನ ಜನ್ಮದಿನಾಚರಣೆ ಅಂಗವಾಗಿ ಅರ್ಥಪೂರ್ಣ ಆರೋಗ್ಯ ಶಿಬಿರವನ್ನ ಆಯೋಜನೆ ಮಾಡಿದ್ದಾರೆ. ಇಲ್ಲಿನ ಜನರು ಹೆಚ್ಚು ಮುದ್ದೆ ಸೇವಿಸುವುದರಿಂದ ಅವರಿಗೆ ರೋಗ ಅಷ್ಟಾಗಿ ಜನರಿಗೆ ಬರುವುದ್ದಿಲ್ಲ ಎಂಬ ನಂಬಿಕೆ ನನಗಿದೆ ಎಂದರು.

ಯಾರಿಗೂ ಕೂಡ ಅಧಿಕಾರ ಶಾಶ್ವತವಲ್ಲ ನಾವು ಮಾಡುವಂತಹ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ. ಆ ನಿಟ್ಟಿನಲ್ಲಿ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ರಾಜಕಾರಣವನ್ನು ವ್ಯವಹಾರದ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಮೋರಿಯ ಕೊಳೆ ನಮಗೆ ಅಂಟಿಕೊಂಡರೆ ತೊಳೆದುಕೊಳ್ಳಬಹುದು, ಆದರೆ ನಮ್ಮ ಹೃದಯವೇ ಕೊಳಕು ಆಗಿದ್ದರೆ ಅದನ್ನು ಹೇಗೆ ತೊಳೆದುಕೊಳ್ಳಲು ಸಾಧ್ಯ, ಟಿವಿಯಲ್ಲಿ ಬರುವಂತಹ ಜ್ಯೋತಿಷ್ಯರನ್ನ ನಂಬುವ ಜನರಿಗಿಂತ ತಮ್ಮ ಕಾಯಕದಲ್ಲಿ ನಿಷ್ಠೆ, ಪ್ರಮಾಣಿಕತೆ ತೋರುವವರು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಆರ್ಥಿಕ ಸಹಾಯದ ಚೆಕ್ ವಿತರಿಸಿದರು. ಅಂಗವಿಕಲರಿಗೆ ವೀಲ್ ಛೇರ್, ಸ್ಟಿಕ್ ನೀಡಿದರು. ಅಲ್ಲದೇ 108 ಮಹಿಳೆಯರಿಂದ ಪಾದಪೂಜೆ ಮಾಡಿದರು.

ಇದೆ ವೇಳೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು,ಶ್ರೀ ಕರೀಬೀರೇಶ್ವರ ಟೈಲ್ಸ್ ಮತ್ತು ಹಾರ್ಡ್‌ವೇರ್ ಮಾಲೀಕರಾದ ಶಿವಕುಮಾರ್,ವಾರ್ತಾಧಿಕಾರಿ ವಿನೂದ್ ಚಂದ್ರ, ಪ್ರೀತಿ ಮೋಹನ್, ಕರವೇ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ವಾಣಿಜ್ಯ ತೆರಿಗೆ ಉಪ ಆಯುಕ್ತ ಚನ್ನಕೇಶವ, ಎಸ್.ಎಸ್.ಎಂ. ಆಸ್ಪತ್ರೆ ಆಡಳಿತಾಧಿಕಾರಿ ಡಾ. ವಿನಯ್ ಕುಮಾರ್,ಹೋಯ್ಸಳ ರೋಟರಿ ಅಧ್ಯಕ್ಷ ಎಂ.ಡಿ. ಕುಮಾರ್, ಜಯಂತ್, ಆನಂದ್, ಸುನೀಲ್, ನಾಗರಾಜು, ಭಾರತ್ ಸೇವಾದಳದ ವಿ.ಎಸ್. ರಾಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net