ಭೀಮನಗರದಲ್ಲಿ ಕಂಡಾಯಗಳ ಅದ್ದೂರಿ ಉತ್ಸವ

ಭೀಮನಗರದಲ್ಲಿ ಕಂಡಾಯಗಳ ಅದ್ದೂರಿ ಉತ್ಸವ
Published on

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಭೀಮನಗರ ಬಡಾವಣೆಯಲ್ಲಿ ಕುರುಬನ ಕಟ್ಟೆಯ ಶ್ರೀ ಜೋತಿಲಿಂಗಯ್ಯ, ಚೆನ್ನಯ್ಯ ಹಾಗೂ ಶ್ರೀ ಸಿದ್ದಪ್ಪಾಜಿ ಕಂಡಾಯಗಳ ಉತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಶ್ರೀ ಕ್ಷೇತ್ರದ ಕುರುಬನಕಟ್ಟೆಯ ಕಂಡಾಯಗಳು ಭಾನುವಾರ ಮಧ್ಯಾಹ್ನವೇ ಬಡಾವಣೆ ಪ್ರವೇಶಿಸಿದವು. ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಕಂಡಾಯಗಳನ್ನು ಇರಿಸಲಾಗಿತ್ತು. ನಂತರ ಕಂಡಾಯಗಳಿಗೆ ಫಲಹಾರ ಸೇವೆಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸೋಮವಾರ ಭೀಮನಗರದ ಶ್ರೀ ಸಿದ್ದಪ್ಪಾಜಿ ಕಂಡಾಯ ಸೇರಿದಂತೆ ಕುರುಬನಕಟ್ಟೆಯ ಕಂಡಾಯಗಳನ್ನು ಕಾವೇರಿ ನದಿಯಲ್ಲಿ ಸ್ವಚ್ಛಗೊಳಿಸಿ ಹೂ, ಹೊಂಬಾಳೆಗಳಿಂದ ಅಲಂಕೃತಗೊಳಿಸಿ ಕಾವೇರಿ ತೀರದಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಬಂದ ಕಂಡಾಯಗಳನ್ನು ನೋಡಲು ದಿಡ್ಡದಕೇರಿ ಬೀದಿಯಲ್ಲಿ ಭಕ್ತರು ಕಿಕ್ಕಿರಿದು ನೆರೆದಿದ್ದರು.

ನೀಲಗಾರರಾದ ಕೆಂಪರಾಜು, ಮಾಲಿಂಗ, ರೇಚಣ್ಣ, ಕೆಂಪರಾಜು, ಸಿದ್ದರಾಜು, ಲಿಂಗರಾಜು, ರೇಚಣ್ಣ, ಗಿರೀಶ್ ಅವರು ಕಂಡಾಯಗಳನ್ನು ಹೊತ್ತು ಚೌಡಮ್ಮನ ಗುಡಿ, ದಿಡ್ಡದಕೇರಿ, ಪನ್ನಬೀದಿ, ಕಲ್ಲುಬಾವಿ ಬೀದಿ, ಪಾಲ ಚಾವಡಿಬೀದಿ, ಬಸವನಗುಡಿ, ಸಿದ್ದಮಲ್ಲಯ್ಯನ ಕೇರಿ, ಹೊಸಬೀದಿ, ಜಿ.ಪಿ.ಮಲ್ಲಪ್ಪ ಪುರಂಗಳಲ್ಲಿ ಮೆರವಣಿಗೆ ಮಾಡಿದರು. ಉತ್ಸವದಲ್ಲಿ ಬಸವೇಶ್ವರ ದೇವಾಲಯದ ಬಸವ ಎಲ್ಲರ ಗಮನ ಸೆಳೆಯಿತು. ಮನೆ ಮುಂಭಾಗಕ್ಕೆ ಬಂದ ಕಂಡಾಯಗಳಿಗೆ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮುಗಿಸಿ ಬಂದ ಕಂಡಾಯಗಳನ್ನು ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ಇರಿಸಲಾಗಿದ್ದು, ಆ.15 ರಂದು ಬೆಳಗ್ಗೆ ಫಲಹಾರ ಪೂಜೆ ನಡೆದ ಬಳಿಕ ಶ್ರೀಕ್ಷೇತ್ರ ಕುರುಬನ ಕಟ್ಟೆಗೆ ಕಂಡಾಯಗಳು ತೆರಳಲಿವೆ.

ಕಂಡಾಯೋತ್ಸವ ಹಿನ್ನೆಲೆಯಲ್ಲಿ ಭೀಮನಗರದ ಎಲ್ಲ ಬೀದಿಗಳಲ್ಲೂ ಸಡಗರ ಮನೆ ಮಾಡಿತ್ತು. ಶ್ರೀ ಬಸವೇಶ್ವರ ದೇವಾಲಯದಲ್ಲೂ ಪೂಜಾ ಕೈಂಕರ್ಯ ನಡೆದವು. ದೇಗುಲಕ್ಕೆ ದೀಪಾಲಂಕಾರ ಮಾಡಲಾಗಿತ್ತು. ಯುವಕರು ಕುಣಿದು ಕುಪ್ಪಳಿಸಿದರು.

ಕಂಡಾಯೋತ್ಸವ ಹಿನ್ನ್ನೆಲೆಯಲ್ಲಿ ಕುರುಬನಕಟ್ಟೆಯ ಮಠದ ಧರ್ಮಾಧಿಕಾರಿ ಶ್ರೀ ವರುಣ ಲಿಂಗರಾಜ ಅರಸ್, ಶ್ರೀ ಚಿಕ್ಕಲ್ಲೂರು ಕ್ಷೇತ್ರದ ಭರತರಾಜೇ ಅರಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಮಂಜುನಾಥ್, ಮಾಜಿ ಶಾಸಕ ಎಸ್.ಜಯಣ್ಣ, ಎನ್.ಮಹೇಶ್, ಎಸ್.ಬಾಲರಾಜು, ನಿವೃತ್ತ ಐಎಎಸ್ ಅಧಿಕಾರಿ ಶಿವರಾಂ, ಬೆಂಗಳೂರಿನ ಸಿಬಿಐ ಡಿವೈಎಸ್ಪಿ ಮಹಾನಂದ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟಣ್ಣ ತಿಮ್ಮರಾಜೀಪುರ, ಭೀಮನಗರದ ಮುಖಂಡರಾದ ಸಿ.ಬಾಬು, ನಟರಾಜು, ಪ್ರಭುಸ್ವಾಮಿ, ನಿಂಗರಾಜು (ಸೇಟು), ಕೆ.ಜೆ.ಜವರಪ್ಪ, ಕರಾಟೆ ಕುಮಾರ್, ಸಿದ್ದಾರ್ಥ, ಜಗದೀಶ್, ಎಸ್.ಎಲ್.ನಿಂಗರಾಜು, ಸೋಮಶೇಖರ್, ಗ್ಯಾಬ್ಲಿ ಸಿದ್ದರಾಜು, ಚಿಕ್ಕಮಾಳಿಗೆ, ಹುಚ್ಚಪ್ಪ, ವಿಜಯ್ ಕುಮಾರ್, ಮರಯ್ಯ, ಕೃಷ್ಣರಾಜು ಮತ್ತಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net