ಭೀಮಣ್ಣ ಖಂಡ್ರೆಗೆ ಹಾನಗಲ್ ಕುಮಾರ ಶ್ರೀ ಪ್ರಶಸ್ತಿ

bhimanna khandre
Published on

ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರಿಗೆ ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠವು 2023ನೇ ಸಾಲಿನ ಹಾನಗಲ್ ಕುಮಾರ ಶ್ರೀ ಪ್ರಶಸ್ತಿ ಪ್ರಕಟಿಸಿದೆ.
ಸಮಾಜೋಧಾರ್ಮಿಕ ಕಾರ್ಯಗಳಿಗಾಗಿ ಖಂಡ್ರೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ತಿಳಿಸಿದ್ದಾರೆ.
ಭೀಮಣ್ಣ ಖಂಡ್ರೆ ಅವರು ಶಾಸಕ, ವಿಧಾನ ಪರಿಷತ್ ಸದಸ್ಯ, ಸಚಿವರಾಗಿ ಬೀದರ್ ಜಿಲ್ಲೆ ಹಾಗೂ ನಾಡಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಕಲ್ಯಾಣ ಕರ್ನಾಟಕ ವಿಮೋಚನೆಯ ಮುಂಚೂಣಿ ಹೋರಾಟಗಾರರು ಹಾಗೂ ಕರ್ನಾಟಕ ಏಕೀಕರಣದ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
ಲೋಕನಾಯಕರೆಂದೇ ಹೆಸರಾಗಿರುವ ಅವರು, ಹಾನಗಲ್ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅತಿ ಹೆಚ್ಚು ಸದಸ್ಯತ್ವ ಮಾಡಿಸುವ ಮೂಲಕ ಮಹಾಸಭೆಗೆ ಬಲ ತುಂಬಿದ್ದಾರೆ. ವೀರಶೈವ ಲಿಂಗಾಯತ ಸಮುದಾಯ, ಮಠ- ಮಾನ್ಯಗಳ ಏಳಿಗೆಗೆ ಅವಿರತ ಶ್ರಮಿಸಿದ್ದಾರೆ. ವಸತಿ ನಿಲಯಗಳ ಮೂಲಕ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಭಾಲ್ಕಿಯಲ್ಲಿ ಡಿ. 2 ರಂದು ನಡೆಯಲಿರುವ ಶತಮಾನೋತ್ಸವ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net