ಭೀಮಗಡ ವನ್ಯಧಾಮದಲ್ಲಿ ವಾಸಿಸುತ್ತಿರುವವವರಿಗೆ ಸೂಕ್ತ ಪರಿಹಾರ ನೀಡಿ ಸ್ಥಳಾಂತರ

05
Published on

ಖಾನಾಪುರ: ಭೀಮಗಡ ವನ್ಯಧಾಮದಲ್ಲಿ ವಾಸಿಸುತ್ತಿರುವ ಕಾನನವಾಸಿಗಳಿಗೆ ಸೂಕ್ತ ಪರಿಹಾರ ನೀಡಿ ಹಂತ ಹಂತವಾಗಿ ಸ್ಥಳಾಂತರಿಸಲು ಅರಣ್ಯ ಇಲಾಖೆ ಬದ್ಧ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.

ತಾಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯ ತಳೇವಾಡಿ ಗ್ರಾಮಕ್ಕೆ ಸೋಮವಾರ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಅವರೊಂದಿಗೆ ಭೇಟಿ ನೀಡಿದ ಸಚಿವ ಖಂಡ್ರೆ, ತಳೇವಾಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆ ಆಲಿಸಿದರು.

ಅರಣ್ಯ ಇಲಾಖೆ ಪ್ರಕಾರ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದ್ದು, ಅರಣ್ಯವಾಸಿಗಳು ಸ್ವಯಂ ಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ತಳೇವಾಡಿ ಭೇಟಿಗೂ ಮುನ್ನ ಸಚಿವರು ಮಹದಾಯಿ ನದಿ ವೀಕ್ಷಿಸಿ ಹೆಮ್ಮಡಗಾ ಗ್ರಾಮದ ಭೀಮಗಡ ಪ್ರಕತಿ ಶಿಬಿರದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪ್ರಸ್ತುತ ಭೀಮಗಡ ಅರಣ್ಯದೊಳಗೆ ಒಟ್ಟು 13 ಜನವಸತಿ ಪ್ರದೇಶಗಳಿವೆ. ಒಟ್ಟು 754 ಕುಟುಂಬಗಳು ವಾಸವಾಗಿವೆ. ಈ ಪೈಕಿ 1530 ಪುರುಷರು, 1443 ಮಹಿಳೆಯರು ಸೇರಿ ಒಟ್ಟು 3059 ಜನರು ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶಕುಮಾರ ದೀಕ್ಷಿತ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ ಪುಷ್ಕರ, ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವಾಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತು ರಾಜಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net