

ಅರಸೀಕೆರೆ : ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಅಬಕಾರಿ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಬಾಣಾವರ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಳ್ಳಿಕೆರೆ ಗ್ರಾಮದ ದುರ್ದೈವಿಗಳ ಅಂತ್ಯ ಸಂಸ್ಕಾರದ ಕಾರ್ಯದ ವೇಳೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದೊಂದು ಆಘಾತಕಾರಿ ಘಟನೆ. ತಮ್ಮ ಕುಟುಂಬಗಳಿಗೆ ಬೆಳಕಾಗಬೇಕಿದ್ದ 5 ಮಕ್ಕಳೂ ಕೂಡ ಅಸುನೀಗಿರುವುದು ಮನಸ್ಸಿಗೆ ತುಂಬಾ ವೇದನೆಯ ವಿಷಯ ಎಂದು ವಿಷಾಧ ವ್ಯಕ್ತಪಡಿಸಿದರು.
ಮೃತರ ಕುಟುಂಬದ ಸರ್ಕಾರ ಸ್ಪಂದಿಸುವ ಸಲುವಾಗಿ ಮೃತ ಪ್ರತಿಯೊಬ್ಬರ ಪರವಾಗಿ ತಲಾ 2 ಲಕ್ಷ ರೂಗಳನ್ನು ವಾರಸುದಾರರಿಗೆ ನೀಡಲಾಗುವುದು ಎಂದರು.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೂ ಕೂಡ ಪರಿಹಾರ ನೀಡುವ ಸಂಬಂಧ ನಾಳಿನ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿತ ದೊಡ್ಡ ಅಪಘಾತವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ನಾಳೆ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು.
ಈ ವೇಳೆ ಶಾಸಕ ಶಿವಲಿಂಗೇಗೌಡ ಇತರರು ಉಪಸ್ಥಿತರಿದ್ದರು.