

ಆಲ್ದೂರು: ಭಾಷೆ ಸೊರಗಿದರೆ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ನೆಲ, ಜಲದ ಉಳಿವಿಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಸಾಪ ಘಟಕಗಳನ್ನು ಪ್ರಥಮವಾಗಿ ಜಾರಿಗೆ ತಂದಿರುವ ಹೆಗ್ಗಳಿಕೆ ಚಿಕ್ಕಮಗಳೂರು ಜಿಲ್ಲೆಗೆ ಸಲ್ಲುತ್ತದೆ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು. ಅಬ್ಬಾಸಿ ರಂಗ ಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಹೋಬಳಿ, ಗ್ರಾಪಂ ವ್ಯಾಪ್ತಿಯಲ್ಲಿ ಕನ್ನಡ ಭವನಕ್ಕೆ ನಿವೇಶನ ಮಂಜೂರಾಗಿದೆ ಎಂದರು.
ಪೂರ್ಣಪ್ರಜ್ಞಾ ಶಾಲೆ ಕಾರ್ಯದರ್ಶಿ ಬಿ.ಬಿ.ರೇಣುಕಾರ್ಯ ಮಾತನಾಡಿ, ಜಾನಪದ ಸಾಹಿತ್ಯ ಹಳ್ಳಿಗಳ ಸೊಗಡು, ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೊಗಡು ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಗ್ರಾಮೀಣ ಭಾಗಕ್ಕೂ ಪಸರಿಸಬೇಕು. ಆಗ ಮಾತ್ರ ನಾಡ, ನುಡಿಯ ಅಭಿಮಾನ ಬೇರುಮಟ್ಟದಿಂದಲೇ ಗಟ್ಟಿಯಾಗುತ್ತದೆ ಎಂದರು.
ತಾಲೂಕು ಅಧ್ಯಕ್ಷ ಬಿಸಿಲೇಹಳ್ಳಿ ಸೋಮಶೇಖರ್ ಮಾತನಾಡಿ, ಕನ್ನಡ ನಾಡಿನ ತೇರನ್ನು ಎಳೆಯಲು ಎಲ್ಲರೂ ಒಂದಾಗಬೇಕಿದೆ. ನೆಲದ ಉಳಿವಿಗಾಗಿ ಒಂದಾಗಿ ಹೋರಾಟ ಮಾಡಬೇಕು. ಕನ್ನಡ ನಿತ್ಯೋತ್ಸವಕ್ಕೆ ಎಲ್ಲರೂ ಒಂದಾಗಿ ಹೆಜ್ಜೆ ಹಾಕೋಣ ಎಂದರು. ನಿಕಟಪೂರ್ವ ಅಧ್ಯಕ್ಷ ಎಚ್.ಎಲ್.ರವಿಕುಮಾರ್ ನೂತನ ಅಧ್ಯಕ್ಷ ನೂರ್ಅಹಮದ್ ಅವರಿಗೆ ಕನ್ನಡ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಕಸಾಪ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಖಾಂಡ್ಯ ಹೋಬಳಿ ಅಧ್ಯಕ್ಷ ರಾಜಪ್ಪ ಗೌಡ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡಿದರು.