

ಮೈಸೂರು: ಸಾಹಿತಿಗಳು ತಮ್ಮ ಪುಸ್ತಕ ಮಾರಾಟ ಆಗುತ್ತಿಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದಾರೆೆಯೇ ಹೊರತು ಕನ್ನಡ ಭಾಷೆ ಏನಾಗುತ್ತಿದೆ ಎಂಬುದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಲೇಖಕ, ಚಿಂತಕ ಪ್ರೊ.ಪುರುಷೋತ್ತಮ ಬಿಳಿಮಲೆ ವಿಷಾದಿಸಿದರು.
ಕುವೆಂಪುನಗರದಲ್ಲಿರುವ ಕಲಾಸುರುಚಿಯಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕನ್ನಡ ಭಾಷ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ಬಿಎಂಶ್ರೀ ಅವರು ಇಂಗ್ಲಿಷ್ ಕೃತಿಯನ್ನು ರಚಿಸಿದಾಗ ಅಂದಿನ ಜನಸಂಖ್ಯೆಗೆ ಒಂದು ಸಾವಿರ ಕೃತಿಗಳನ್ನು ಮುದ್ರಣ ಮಾಡಿಸಿದ್ದರು. ಆದರೆ, ಇಂದು ಜನಸಂಖ್ಯೆ ಮೂರು ಪಟ್ಟು ಹೆಚ್ಚಾದರೆ ಮಾರಾಟ ಮಾತ್ರ ಶೇ.80 ರಷ್ಟು ಕಡಿಮೆಯಾಗಿದೆ. ಈ ಬಗ್ಗೆ ಚಿಂತಿಸಬೇಕು, ಕನ್ನಡ ಭಾಷೆ ಏನಾಗಿದೆ ಎನ್ನುವುದ ಕುರಿತು ಚರ್ಚೆ ನಡೆಯಬೇಕಿದೆ ಎಂದರು.
ವರ್ಷದಿಂದ ವರ್ಷಕ್ಕೆ ಮಾತೃಭಾಷೆಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಭಾಷೆ ಉಳಿಸುವತ್ತ ಸರ್ಕಾರ ಗಮನ ಹರಿಸುತ್ತಿಲ್ಲ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಮಾತೃಭಾಷೆಗಳ ಸಂಖ್ಯೆ 19568 ಇತ್ತು. ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿ 76 ಭಾಷೆಗಳಿದ್ದರೂ ಅವುಗಳನ್ನು ಹೆಚ್ಚು ಬಳಸಲಾಗುತ್ತಿಲ್ಲ. ಜತೆಗೆ ಅಂತಹ ಭಾಷೆಗಳನ್ನು ಉಳಿಸುವ ಕುರಿತು ಯಾರು ಮಾತನಾಡುವುದಿಲ್ಲ ಎಂದು ಹೇಳಿದರು.
ಕನ್ನಡ ಸೇರಿದಂತೆ ದೇಶದ ಇತರೆ ಭಾಷೆಗಳ ಬಗ್ಗೆ ವಿದ್ವತ್‌ಪೂರ್ಣ ಚರ್ಚೆ, ವಿಶ್ಲೇಷಣೆ ಹಾಗೂ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುವ ಅಥವಾ ಪತ್ರಿಕೆಯಲ್ಲಿ ಪ್ರಕಟಿಸುವ ವರದಿಗಳು ಬರುತ್ತಿಲ್ಲ. ಭಾಷೆಯ ಕುರಿತು ಆಳವಾಗಿ ನೋಡಿದಾಗ ಗಂಭೀರ ಚರ್ಚೆ ನಡೆಯದಿರುವುದು ಬೇಸರದ ಸಂಗತಿ ಎಂದರು.
ಎಲ್ಲ ಭಾಷೆಗಳು ಸಮಾನ ನೆಲೆಗಟ್ಟಿಗೆ ಬರಬೇಕು. ಕನ್ನಡ ಮತ್ತು ಕರ್ನಾಟಕ ರಾಜ್ಯ ಯಾವ ರೀತಿಯಲ್ಲಿ ರೂಪುಗೊಂಡಿತು ಎಂಬುದರ ಕುರಿತು ಅರಿಯಬೇಕು. ಸರ್ವ ಜನಾಂಗದ ಶಾಂತಿಯ ತೋಟ ಅಂದರೆ ಏನು ಅರ್ಥ ಮೊದಲು ತಿಳಿಯಬೇಕು ಎಂದರು.
ಸ್ವತಂತ್ರ ಭಾಷೆಗಳನ್ನು ಅಂಗೀಕರಿಸಿ ಅವುಗಳನ್ನು ವಿಮೋಚನೆಗೊಳಿಸಬೇಕು. ಹತ್ತು ಸಾವಿರ ಜನಸಂಖ್ಯೆ ಹೊಂದಿರುವ ಜನಾಂಗವನ್ನು ಮಾತೃಭಾಷೆಯಿಂದ ಕೈ ಬಿಡುವ ಬದಲಿಗೆ ಅಂತವುಗಳನ್ನು ಮೊದಲ ಸಾಲಿನ ಸಂಖ್ಯೆಗೆ ತರಬೇಕು. ಭಾಷೆಗಳನ್ನು ಸಾಯಿಸುವ ಬದಲು ಉಳಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.
ದೇಶದ ಭಾಷೆ, ಜನಸಂಖ್ಯೆ, ಆರ್ಥಿಕತೆ ತಿಳಿಯಲು 2021ರ ಜನಗಣತಿ ನಡೆಯಬೇಕಿತ್ತಾದರೂ 2024ರ ನಂತರ ಜನಗಣತಿ ಮಾಡಲು ಉದ್ದೇಶಿಸಲಾಗಿದೆ. ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಗಣತಿ ಮಾಡಿ ವರದಿ ಬಿಡುಗಡೆ ಮಾಡಲು ಮುಂದಾಗಿವೆ ಎಂದು ದೂರಿದರು.