

ತರೀಕೆರೆ: ಕರ್ನಾಟಕದಲ್ಲಿ ಕನ್ನಡ ಭಾಷಾ ಶಿಕ್ಷಕರೇ ಆಂಗ್ಲ ಭಾಷಾ ವಿಷಯ ಬೋಧಿಸುವ ಪರಿಸ್ಥಿತಿ ಎದುರಾಗಿರುವುದರಿಂದ ಕನ್ನಡ ಭಾಷೆ ಉಳಿಸಿ ಬೆಳೆಸಲು ಜನಸಾಮಾನ್ಯರು ಆಂದೋಲನವನ್ನೇ ನಡೆಸಬೇಕಿದೆ ಎಂದು ಕನ್ನಡ ಅಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಹೇಳಿದರು.
ರಂಗೇನಹಳ್ಳಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸದ್ಗುರು ಜನಸೇವಾ ೌಂಡೇಶನ್, ಅರಿವು ವೇದಿಕೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕಾರ್ಯಾಗಾರದಲ್ಲಿ ಮಾತನಾಡಿದರು. ನಮ್ಮ ಭಾಷೆ, ನೆಲದ ಸಂಸ್ಕೃತಿಯನ್ನು ಗೌರವಿಸಬೇಕು. ಸಂಸ್ಕೃತಿ, ಸಮಾನತೆ ಮತ್ತು ಸಹೋದರತ್ವ ಇಂದಿನ ಬಹುಮುಖ್ಯ ಅಂಶವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷಾ ಅಸ್ಮಿತೆ ಕಟ್ಟಿ ಬೆಳೆಸಲು ಶ್ರಮಿಸಬೇಕು ಎಂದರು.
ಕನ್ನಡ ಅಭಿವದ್ಧಿ ಪ್ರಾಧಿಕಾರ ಪ್ರತಿ ಜಿಲ್ಲೆಯಲ್ಲಿ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರ ಕಾಲಕ್ಕೆ ತಕ್ಕಂತೆ ಆಯೋಜಿಸುತ್ತಿದೆ. ಸಣ್ಣ ಗ್ರಾಮಗಳಿಗೆ ಗಣ್ಯರನ್ನು ಕರೆತಂದು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಬೇಕಾದ ಸಲಹೆ, ಸೂಚನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದೆ ಎಂದರು.
ಕನ್ನಡ ಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಎಲ್ಲರನ್ನೂ ಒಳಗೊಂಡಂತೆ ಕನ್ನಡಿಗರು ಏನು ಮಾಡಬೇಕು ಎಂಬುದರ ಕುರಿತು ಸರ್ಕಾರಕ್ಕೆ ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾದವರ ಸವಿಸ್ತಾರ ವರದಿ ತಯಾರಿಸಿ ಸಲ್ಲಿಸಬೇಕು. ಆ ವರದಿ ಸದಾ ಜೀವಂತವಾಗಿರಬೇಕು. ಈ ದಿಸೆಯಲ್ಲಿ ಶಿಬಿರಾರ್ಥಿಗಳ ಜತೆ ಚಿಂತನೆ ನಡೆಸಿ ಪುಸ್ತಕ ರೂಪದಲ್ಲಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂಬ ಉದ್ದೇಶ ಈ ಕಾರ್ಯಾಗಾರದ್ದಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನೆಲೆಸಿರುವ ಜನ 116 ಉಪ ಭಾಷೆಗಳನ್ನು ಬಳಸುತ್ತಿದ್ದು, ಭವಿಷ್ಯದ ದಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದಲ್ಲ. ಅಲ್ಲಿನ ಜನ ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದರು.
ಕನ್ನಡ ಅಭಿವದ್ಧಿ ಪ್ರಾಧಿಕಾರದ ಸದಸ್ಯ ಡಾ. ರವಿಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ರವಿ ದಳವಾಯಿ, ಪ್ರಧಾನ ಕಾರ್ಯದರ್ಶಿ ಮಿಲ್ಟ್ರೀ ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಸದ್ಗುರು ಜನಸೇವಾ ೌಂಡೇಶನ್ ಅಧ್ಯಕ್ಷ ಟಿ.ಎನ್.ಜಗದೀಶ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಪ್ರಮುಖರಾದ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್, ಮಂಜುನಾಥ್, ಉಮಾ, ಸುನೀತಾ ಇತರರಿದ್ದರು.