

ಹುಬ್ಬಳ್ಳಿ: ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಫೆ. 15ರಂದು ‘ಭಾಷಾಂತರ ಸಿದ್ಧಾಂತ ಮತ್ತು ಅನ್ವಯಿಕ: ಹೊಸ ಪರಿಕಲ್ಪನೆಗಳು’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಮಹಾವಿದ್ಯಾಲಯ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ. ಗುರುನಾಥ ಬಡಿಗೇರ, ಕವಿವಿ ಇಂಗ್ಲಿಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಮಗ್ರ ವಚನ ಸಾಹಿತ್ಯವನ್ನು ಇಂಗ್ಲಿಷ್ಗೆ ಭಾಷಾಂತರ ಮಾಡಿದ ಡಾ. ಸಿ.ಆರ್. ಯರವಿಂತೆಲಿಮಠ ಅವರ ಗೌರವಾರ್ಥ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಕವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ ಉದ್ಘಾಟಿಸುವರು. ದೆಹಲಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಭರತ ಗುಪ್ತ ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಟ್ರಾನ್ಸ್ -ಕಾನಕ್ಲೇನ್ನಲ್ಲಿ ಭಾಷಾಂತರ ಕಲೆ, ವ್ಯಕ್ತಿ, ಜ್ಞಾನ ಎಂಬ ವಿಷಯ ಕುರಿತು ಚರ್ಚೆ ನಡೆಯಲಿದೆ. ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಮಾಧವ ಪೆರಾಜ್, ಮುಖ್ಯಮಂತ್ರಿಯವರ ಇ-ಆಡಳಿತ ಸಲಹೆಗಾರ ಬಿ.ಎಂ. ಸುದರ್ಶನ ಪಾಲ್ಗೊಳ್ಳುವರು.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ 500ಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸುವರು.
80 ವರ್ಷ ಪೂರೈಸಿ, ಸಹಸ್ರ ಚಂದ್ರದರ್ಶನ ಮಾಡಿರುವ ಡಾ. ಸಿ.ಆರ್. ಯರವಿಂತೆಲಿಮಠ ಅವರಿಗೆ ಮಧ್ಯಾಹ್ನ 3.30ಕ್ಕೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ. ಗದಗ-ಡಂಬಳದ ಶ್ರೀ ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ ನೆರವೇರಿಸುವರು. ಶಾಸಕ ಅರವಿಂದ ಬೆಲ್ಲದ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸುವರು ಎಂದು ವಿವರಿಸಿದರು.
ಸಂಘದ ಅಧ್ಯಕ್ಷ ಡಾ. ರಘು ಅಕಮಂಚಿ, ಡಾ. ಮಲ್ಲಿಕಾರ್ಜುನ ಪಾಟೀಲ, ಡಾ. ಶಾಮಲಾ ರತ್ನಾಕರ, ಡಾ. ಬಸವರಾಜ ತಲ್ಲೂರ ಇತರರು ಉಪಸ್ಥಿತರಿದ್ದರು.