ಭಾಷಾ ಪ್ರೌಢಿಮೆ ಪುಟಿದೇಳಿಸಿದ ಪದಬಂಧ

28
Published on

ಮೈಸೂರು: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಕನ್ನಡ ಪದಬಂಧ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೌಢಿಮೆ ಮತ್ತು ಚಿಂತನಾ ಕಾರಂಜಿಯನ್ನು ಪುಟಿದೇಳಿಸಿತು.

ಸ್ವಾತಂತ್ರೊೃೀತ್ಸವದ ಅಂಗವಾಗಿ ನಗರದ ಹೊಸಮಠದ ಶ್ರೀ ನಟರಾಜ ಶಿಕ್ಷಣ ಸಂಸ್ಥೆಯಲ್ಲಿ ಆ. 12ರಂದು (ಶನಿವಾರ) ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೋಮವಾರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗಿರುವ ಪದಬಂಧ ಸ್ಪರ್ಧೆಗೆ ನಗರದ ವಿವಿಧ ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾಗಿದ್ದರು.


ಪದಬಂಧಗಳು ಮನೋರಂಜನೆಗಾಗಿ ರಚಿಸಲ್ಪಡುವ ಒಂದು ಬಗೆಯ ಪದದ ಆಟ. ಒಂದು ದೊಡ್ಡ ಚೌಕದಲ್ಲಿ ಅನೇಕ ಚಿಕ್ಕ ಕಪ್ಪು ಮತ್ತು ಬಿಳಿಯ ಚೌಕಗಳಿದ್ದವು. ಬಿಳಿ ಚೌಕಗಳಲ್ಲಿ ಅಕ್ಷರಗಳನ್ನು ತುಂಬುವಂತೆ ಸುಳಿವು ನೀಡಲಾಗಿತ್ತು. ಅದನ್ನು ಓದಿ ಸ್ಪರ್ಧಿಗಳು ಅಕ್ಷರದಾಟವಾಡಿದರು. 30 ನಿಮಿಷಗಳ ಕಾಲಾವಧಿಯಲ್ಲಿ ತ್ವರಿತಗತಿಯಲ್ಲಿ ಬಿಟ್ಟ ಜಾಗವನ್ನು ಭರ್ತಿ ಮಾಡಿ ಸಂಭ್ರಮಿಸಿದರು.


ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ ‘ಪದಬಂಧ’. ನಿತ್ಯ ಪತ್ರಿಕೆ ಓದಿಕೊಂಡು ಪದಲೋಕದಲ್ಲಿ ವಿಹರಿಸುವ ವಿದ್ಯಾರ್ಥಿಗಳಿಗೆ ಪದಕ್ರೀಡೆ ಬಹಳ ಸರಳ, ಸುಲಭ ಮತ್ತು ಸುಲಲಿತ ಎನಿಸಿತು.


ಬಹುಮಾನ ವಿತರಣೆ:
ಸ್ವಾತಂತ್ರೊೃೀತ್ಸವದ ಮುನ್ನ ದಿನವಾದ ಸೋಮವಾರ ಕನ್ನಡ ಪದಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶ್ರೀ ನಟರಾಜ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಣ್ಯರು ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ನೀಡಿ ಪುರಸ್ಕರಿಸಿದರು.

ಭಾಷಾಭಿವೃದ್ಧಿ, ಜ್ಞಾನ ಭಂಡಾರ ವಿಸ್ತಾರ
ಪದಬಂಧ ರಚನೆಯಿಂದ ಭಾಷಾ ಅಭಿವೃದ್ಧಿ ವೃದ್ಧಿಯಾಗಲಿದೆ. ಜ್ಞಾನ ಭಂಡಾರವೂ ವಿಸ್ತಾರವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಪದಬಂಧ ಆಟದಲ್ಲಿ ಸಕ್ರಿಯವಾಗಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಸಲಹೆ ನೀಡಿದರು.
ಶ್ರೀ ನಟರಾಜ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಈ ಹಿಂದೆ ಪದಬಂಧ ಭರ್ತಿ ಮಾಡುವುದು ಜನರಿಗೆ ದೊಡ್ಡ ಹವ್ಯಾಸ ಆಗಿತ್ತು. ಅಷ್ಟರಮಟ್ಟಿಗೆ ಅದನ್ನು ಆಡುತ್ತಿದ್ದರು. ಬಸ್, ರೈಲು, ಕಾರುಗಳಲ್ಲಿ ಪ್ರಯಾಣ ಮಾಡುವ ಸಂದರ್ಭ ಮತ್ತು ಸಭೆ-ಸಮಾರಂಭದಲ್ಲೂ ಪದಬಂಧ ರಚನೆ ಮಾಡುತ್ತಿದ್ದರು. ಆ ರೀತಿಯ ಗೀಳು ಬೆಳೆಸಿಕೊಂಡಿದ್ದರು. ಆದರೆ, ಮೊಬೈಲ್, ಟಿವಿ ಬಂದ ಬಳಿಕ ಈ ಅಭ್ಯಾಸ ಕಡಿಮೆಯಾಗಿದೆ. ಇದರಿಂದಾಗಿ ಈಗಿನ ಯುವಜನರಲ್ಲಿ ಭಾಷಾಜ್ಞಾನ ಕುಗ್ಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪದಬಂಧ ರಚನೆ ವೈಯಕ್ತಿಕ ಹವ್ಯಾಸವಾಗಲಿ. ಏಕಾಂತ ಸಮಯದಲ್ಲಿ ಇದರೊಂದಿಗೆ ಕಾಲ ಕಳೆಯಲು ಅವಕಾಶ ದೊರೆಯುತ್ತದೆ. ಜತೆಗೆ, ಭಾಷಾ ಪ್ರೌಢಿಮೆಯೂ ಬೆಳವಣಿಗೆ ಆಗಲಿದೆ ಎಂದರು.


ಯುವಜನರು ಶಿಕ್ಷಣದ ಕಡೆ ಗಮನ ನೀಡಬೇಕು. ಉಳಿದ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳಬಾರದು. ಜ್ಞಾನ ಎಂದಿಗೂ ಮೋಸ ಮಾಡುವುದಿಲ್ಲ. ಬದಲಿಗೆ ಜೀವನವಿಡೀ ಕೈಹಿಡಿದು ಮುನ್ನೆಡೆಸಲಿದೆ. ಆದ್ದರಿಂದ ಉತ್ತಮ ಜ್ಞಾನ, ಶಿಕ್ಷಣ ಪಡೆದುಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಂಡು ದೇಶಾಭಿವೃದ್ಧಿಗೆ ಕಾಣಿಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಭಾರತ ಚರಿತ್ರೆಯನ್ನು ವಿವರಿಸಿದ ಸಿದ್ದಪ್ಪ ಅವರು, ನೂರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಯಲ್ಲಿ ಭಾರತ ಸಿಲುಕಿಕೊಂಡಿತ್ತು. ಇಡೀ ದೇಶದ ಜನರು ಗುಲಾಮರಾಗಿ ಬದುಕುತ್ತಿದ್ದರು. ಆದರೀಗ ಸ್ವಾತಂತ್ರೃದ 76 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ ಎಂದರು.


ದಾಳಿಕೋರರು ಸ್ವದೇಶದ ಪಾರಂಪರಿಕ ಜ್ಞಾನವನ್ನು ಹಾಳು ಮಾಡಿದರು. ನಳಂದ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳನ್ನು ಮುಂದುವರಿಯಲು ಬಿಡಲಿಲ್ಲ. ವಿದೇಶಿಯರು ನಮ್ಮ ದೇಶವನ್ನು ಮಾತ್ರ ಆಕ್ರಮಿಸಿಕೊಳ್ಳಲಿಲ್ಲ, ಇಲ್ಲಿಯ ಜನರ ಬೌದ್ಧಿಕ ಮಟ್ಟವನ್ನೇ ಹಾಳುಮಾಡಿದರು. ಆದರೆ ಸ್ವಾತಂತ್ರೃದ ಬಳಿಕ ದೇಶ ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ಇದರೊಂದಿಗೆ ಸಾಮಾಜಿಕ, ಆರ್ಥಿಕ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ರಂಗದಲ್ಲೂ ಪ್ರಗತಿಯ ದಾಪುಗಾಲು ಇಟ್ಟಿದೆ. ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ ಎಂದು ಹೇಳಿದರು.


ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷರೂ ಆದ ಹೊಸಮಠದ ಪೀಠಾಧಿಪತಿ ಶ್ರೀ ಚಿದಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ವಹಿಸಿದ್ದರು. ‘ವಿಜಯವಾಣಿ’ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹೇಶ್ ದಳಪತಿ, ಶ್ರೀ ನಟರಾಜ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಸಾದ್ ಮೂರ್ತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್ ಇನ್ನಿತರರಿದ್ದರು.

ವಿಜೇತರಿಗೆ ನಗದು, ಟ್ರೋಫಿ, ಪ್ರಮಾಣಪತ್ರ

ಪದಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ವೈ.ಕಾವೇರಿ, ಎಂ.ಹೇಮಶ್ರೀ, ಎಸ್.ಮಹಾಲಕ್ಷ್ಮೀ, ವಾತ್ಸಲ್ಯ ಬಿ.ಇಡಿ ಕಾಲೇಜಿನ ವಿ.ಎನ್.ಶ್ರೀನಿವಾಸ್, ಮಹದೇವಮ್ಮ, ಎಸ್.ಪವಿತ್ರಾ, ಬಿ.ಎಂ.ಸುಲೋಚನಾ, ಟಿ.ಆರ್.ಕಾರ್ತಿಕ್, ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಎಚ್.ಸಿ.ಭಾರತಿ, ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜಿನ ಎಸ್.ವಿ.ಶ್ರೀಲತಾ ಅವರಿಗೆ ತಲಾ 1 ಸಾವಿರ ರೂ. ನಗದು ಬಹುಮಾನ, ಟ್ರೋಫಿ ಮತ್ತು ಪ್ರಮಾಣಪತ್ರ ವಿತರಣೆ ಮಾಡಲಾಯಿತು.

ವಿಜಯವಾಣಿಯಿಂದ ಜನಮುಖಿ ಕೆಲಸ:
ವಿಜಯವಾಣಿ ಪತ್ರಿಕೆ ಕೇವಲ ಸುದ್ದಿ, ಮಾಹಿತಿಯನ್ನು ಓದುಗರಿಗೆ ತಲುಪಿಸುವ ಕೆಲಸಕ್ಕೆ ಸಿಮೀತವಾಗಿಲ್ಲ. ಅದರಾಚೆಯೂ ಸಮಾಜಮುಖಿ ಚಟುವಟಿಕೆಗಳಿಂದ ಓದುಗರಿಗೆ ಹತ್ತಿರವಾಗಿದೆ ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್.ಶಿವರಾಜಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಪತ್ರಿಕೆಗಳು ಬರಿ ಜಾಹೀರಾತು, ದ್ವೇಷ-ಕಿಚ್ಚು ಹಚ್ಚಲು ಮಾತ್ರ ಸಿಮೀತವಾಗಬಾರದು. ಸುದ್ದಿ ಸಮಾಚಾರವನ್ನು ಜನರಿಗೆ ಮುಟ್ಟಿಸುವುದರೊಂದಿಗೆ, ಜನಮುಖಿ ಕೆಲಸದಲ್ಲೂ ಸಕ್ರಿಯವಾಗಬೇಕು. ಈ ನಿಟ್ಟಿನಲ್ಲಿ ವಿಜಯವಾಣಿ ಉತ್ತಮ ಕೆಲಸ ಮಾಡುತ್ತಿದೆ. ಜಾತ್ಯತೀತ, ಧರ್ಮಾತೀತ, ವರ್ಗಾತೀತವಾಗಿ ಸಮಾಜಮುಖಿ ಕೆಲಸವನ್ನು ಕೈಗೆತ್ತಿಕೊಂಡಿದೆ. ಇದು ಮಾದರಿ ಉಪಕ್ರಮ ಎಂದರು.
ಪತ್ರಿಕಾರಂಗಕ್ಕೆ ಗೌರವ ಮತ್ತು ಮನ್ನಣೆ ಸದಾಕಾಲ ಇದೆ. ಇದನ್ನು ವಿಜಯವಾಣಿ ಪಡೆದುಕೊಂಡಿದ್ದು, ತನ್ನ ಚಟುವಟಿಕೆಗಳ ಮೂಲಕ ಸಾಕ್ಷಾತ್ಕರಿಸಿದೆ ಎಂದರು.

ಸ್ಪರ್ಧೆ ಬಹಳ ಕುತೂಹಲಕಾರಿಯಾಗಿತ್ತು. ಬಿ.ಎಡ್ ವಿದ್ಯಾರ್ಥಿಯಾದ ನನಗೆ ಇದೊಂದು ಪುನಶ್ಚೇತನ ಕಾರ್ಯಕ್ರಮದಂತೆ ಇತ್ತು. ಪದಬಂಧ ಬರೆದು ತುಂಬ ದಿನವೇ ಆಗಿತ್ತು. ಮರೆತು ಹೋಗಿದ್ದ ಇದನ್ನು ಬರೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ವಿಜಯವಾಣಿ ಪತ್ರಿಕೆಗೆ ಧನ್ಯವಾದ. ಬಹುಮಾನದ ನಿರೀಕ್ಷೆ ಇರಲಿಲ್ಲ. ಉತ್ತಮ ಪ್ರಯತ್ನ ಮಾಡಿದ್ದೆ. ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿ ಆಗಿದೆ.
ಬಿ.ಎಂ.ಸುಲೋಚನಾ, ವಿಜೇತೆ

ವಿಜಯವಾಣಿ ಪತ್ರಿಕೆಯಲ್ಲಿ ನಿತ್ಯ ಪ್ರಕಟಿಸುವ ಪದಬಂಧವನ್ನು ಬರೆಯುವ ಅಭ್ಯಾಸ ಮಾಡಿಕೊಂಡು ಬಂದಿದ್ದೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದ ಇದು ಹವ್ಯಾಸವಾಗಿ ಹೋಗಿದೆ. ಇದರಿಂದಾಗಿ ವಿಜಯವಾಣಿ ಆಯೋಜಿಸಿದ್ದ ಪದಬಂಧ ಸ್ಪರ್ಧೆ ಸುಲಭ ಮತ್ತು ಸರಳ ಎನಿಸಿತು. ಕೇವಲ 7 ನಿಮಿಷದಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದೆ.
ಎಸ್.ವಿ.ಶ್ರೀಲತಾ, ವಿಜೇತೆ

ಪದಬಂಧ ಸ್ಪರ್ಧೆಯಲ್ಲಿ ಭಾಗಿವಹಿಸಿ ಬಹುಮಾನ ಪಡೆದುಕೊಂಡಿದ್ದಕ್ಕೆ ಸಂತೋಷವಾಗಿದೆ. ಪ್ರೌಢಶಾಲಾ ಹಂತದಲ್ಲಿ ಪದಬಂಧ ರಚನೆ ಮಾಡುತ್ತಿದ್ದೆ. ಬಳಿಕ ಈ ಅಭ್ಯಾಸ ಕಡಿಮೆಯಾಗಿತ್ತು. ಕಾಲೇಜು ಹಂತದಲ್ಲಿ ಇಂತಹವೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದ್ದು ಅನಿರೀಕ್ಷಿತ ಸಂತೋಷವಾಗಿದೆ.
ವಿ.ಎನ್.ಶ್ರೀನಿವಾಸ್, ವಿಜೇತ

ಹಿಂದೆ ಈ ರೀತಿಯ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ. ವಿಜಯವಾಣಿ ಆಯೋಜಿಸಿದ್ದ ಪದಬಂಧ ರಚನಾ ಸ್ಪರ್ಧೆಯಲ್ಲಿ ಮೊದಲ ಬಾರಿ ಭಾಗಿಯಾಗಿದ್ದೆ. ಇದು ಚೆನ್ನಾಗಿತ್ತು. ಜತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿತ್ತು. ಇದು ಕನ್ನಡ ಭಾಷಾ ಜ್ಞಾನ ಬೆಳೆವಣಿಗೆಗೆ ಅನುಕೂಲವಾಗಿದೆ. ಅನೇಕ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಎಸ್.ಪವಿತ್ರಾ, ವಿಜೇತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net