

ಚಿತ್ರದುರ್ಗ: ಸರ್ಕಾರದ ವಿರುದ್ಧ ವರದಿ ಪ್ರಕಟಿಸಿದ್ದರ ಪರಿಣಾಮ ಇಂಗ್ಲೆಂಡ್‌ನಲ್ಲಿ ಅನ್ಯ ಭಾಷಾ ಪತ್ರಿಕೆಗಳನ್ನು ಹತ್ತಿಕ್ಕುವ ಕೆಲಸವಾಯಿತು. ಹೀಗಾಗಿ ಬಂಗಾಳಿಯ ಅಮೃತಾ ಬಜಾರ್ ಇಂಗ್ಲೀಷ್ ಪತ್ರಿಕೆಯಾಯಿತು. ಆಳುವವರು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸುವ ಧೋರಣೆ ಸರಿಯಲ್ಲ. ಭಾಷಾ ಪತ್ರಿಕೆಗಳ ಉಳಿವು ತುಂಬಾ ಅಗತ್ಯವಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಹೇಳಿದರು.
ಎಸ್‌ಆರ್‌ಎಸ್ ಕಾಲೇಜು ಆವರಣದ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ರಾಜ್ಯ ಮತ್ತು ಜಿಲ್ಲಾ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಬೇರೆ-ಬೇರೆ ವಿಚಾರಕ್ಕೆ ಟೀಕಿಸಿರಬಹುದು. ಆದರೆ, ಕೋವಿಡ್ ಸಮಯದಲ್ಲಿ ಅಗತ್ಯ ಸೇವೆಯಲ್ಲಿ ಮಾಧ್ಯಮಕ್ಕೂ ಅವಕಾಶ ನೀಡಿದ್ದನ್ನು ಸ್ವಾಗತಿಸುತ್ತೇನೆ. ಈ ವೇಳೆ 720ಕ್ಕೂ ಹೆಚ್ಚು ಪತ್ರಕರ್ತರು ಮೃತಪಟ್ಟರು. ಮಾಸಿಕ ನಾಲ್ಕೈದು ಸಾವಿರ ವೇತನ ಪಡೆಯುವ ಸ್ಟ್ರಿಂಜರ್ಸ್‌ಗಳು 4-5 ಲಕ್ಷ ರೂ. ಹಣ ಕಳೆದುಕೊಂಡರು ಜೀವ ಉಳಿಯಲಿಲ್ಲ. ಮಾಧ್ಯಮ ಮಿತ್ರರ ಹಿತರಕ್ಷಣೆ ಕೂಡ ಮುಖ್ಯವಾಗಬೇಕು ಎಂದರು.
ಕೋವಿಡ್ ಸಮಯದಲ್ಲಿ 47 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ ಎಂದು ಡಬ್ಲುೃಎಚ್‌ಒ ವರದಿ ಹೇಳುತ್ತದೆ. ಆದರೆ, ವಿಶ್ವ ಗುರು 4.82 ಲಕ್ಷ ಜನ ಎನ್ನುತ್ತಾರೆ. 10 ವರ್ಷದಲ್ಲಿ ಒಂದೂ ಸುದ್ದಿಗೋಷ್ಠಿ ಮೋದಿ ಅವರು ನಡೆಸಿಲ್ಲ. ಈ ಕುರಿತು ಯಾವ ಮಾಧ್ಯಮವೂ ಪ್ರಶ್ನಿಸಿಲ್ಲ. ಹಲವು ಕ್ಷೇತ್ರಗಳ ಖಾಸಗೀಕರಣ ದೇಶ ಮತ್ತು ಪ್ರಜೆಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಬೇಸರಿಸಿದರು.
ಕೊಪ್ಪಳ ವಿವಿ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಕನ್ನಡ ಭಾಷಾ ಪತ್ರಿಕೋದ್ಯಮ ತನ್ನದೇ ಆದ ಸಾಕಷ್ಟು ಸಮಸ್ಯೆ, ಸವಾಲು ಎದುರಿಸುತ್ತಿವೆ. ಪತ್ರಕರ್ತರ ಆರ್ಥಿಕ ಸ್ಥಿತಿ-ಗತಿ ಕೂಡ ಬದಲಾಗಿಲ್ಲ. ಸಮಾಜ ಮತ್ತು ಜನರ ರಕ್ಷಣೆಗಾಗಿ ನಿತ್ಯ ಶ್ರಮಿಸುತ್ತಿರುವ ಮಾಧ್ಯಮ ಮಿತ್ರರ ಜೀವನಕ್ಕೆ ಭದ್ರತೆ ಇಲ್ಲವಾಗಿದೆ. ಈ ವಿಚಾರದಲ್ಲಿ ಸುಧಾರಣೆ ತರಬೇಕಾದ ಅಗತ್ಯವಿದೆ ಎಂದು ಒತ್ತಾಯಿಸಿದರು.
ಚಿತ್ರದುರ್ಗ ಗಂಡು-ಹೆಣ್ಣು ಮೆಟ್ಟಿದ ನಾಡು. ರಾಜ್ಯಕ್ಕೆ ಈ ಜಿಲ್ಲೆಯ ಪತ್ರಕರ್ತರು ನೀಡಿದ ಕೊಡುಗೆಯೂ ಅಪಾರ. ಸಾಮಾಜಿಕ ಕಳಕಳಿ ಮರೆಯುತ್ತಿರುವ, ದೇಶದ ಹಾಗೂ ಪ್ರಜೆಗಳ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ಏನೆಂಬುದರ ಕುರಿತು ಬೆಳಕು ಚೆಲ್ಲುವ ಪ್ರಾಮಾಣಿಕ ಕಾರ್ಯವನ್ನು ಪಿ.ಸಾಯಿನಾಥ್ ಮಾಡಿದ್ದಾರೆ. ಹೀಗಾಗಿ ಮಾಧ್ಯಮ ಕ್ಷೇತ್ರಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಮಾಧ್ಯಮ ಕ್ಷೇತ್ರದಲ್ಲೂ ತಂತ್ರಜ್ಞಾನ ವೇಗವನ್ನು ಹೆಚ್ಚಿಸಿದೆಯೇ ಹೊರತು ಸಂವಹನ ಕ್ರಿಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬಳಸುವ ನೈಪುಣ್ಯತೆ ಇದ್ದರೆ, ಸ್ವಂತ ಬುದ್ಧಿಶಕ್ತಿಯಿಂದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತ ವಿಶೇಷ ವರದಿ ಬರೆದು ರಾಜ್ಯ, ದೇಶದ ಗಮನ ಸೆಳೆಯಬಹುದು ಎಂದು ಸಲಹೆ ನೀಡಿದರು.
ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, 1932ರಲ್ಲಿ ಡಿ.ವಿ.ಗುಂಡಪ್ಪ ಅವರು ಸಂಘ ಸ್ಥಾಪಿಸಿದರು. ಕರ್ನಾಟಕ ಏಕೀಕರಣದ ನಂತರ ಹೆಸರು ಬದಲಾಯಿತು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಘವಿದ್ದು, ದೇಶದಲ್ಲೇ 8 ಸಾವಿರ ಪತ್ರಕರ್ತರು ಸದಸ್ಯರಿರುವ ಏಕೈಕ ಸಂಘ ನಮ್ಮದಾಗಿದೆ ಎಂದರು.
ಹಿರಿಯ ಪತ್ರಕರ್ತ ಬಿ.ವಿ.ಮಲ್ಲಿಕಾರ್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಲೋಕೇಶ, ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್.ಸಿದ್ಧರಾಜು, ಖಜಾಂಚಿ ಡಿ.ಕುಮಾರಸ್ವಾಮಿ, ಉಪಾಧ್ಯಕ್ಷ ಸಿ.ಪಿ.ಮಾರುತಿ, ಕಾರ್ಯದರ್ಶಿಗಳಾದ ವಿ.ವೀರೇಶ್, ನಾಗರಾಜ ಕಟ್ಟೆ, ಬಿ.ಎಸ್.ವಿನಾಯಕ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಯೋಗೀಶ್ ಇತರರಿದ್ದರು.