

ಚಿತ್ರದುರ್ಗ: ಮಕ್ಕಳಲ್ಲಿ ಭಾಷಾ ಕೌಶಲಾಭಿವೃದ್ಧಿಪಡಿಸಲು ಓದುವ ಹವ್ಯಾಸ ಸಹಕಾರಿ ಎಂದು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾ ಲಯದ(ಸಿಟಿಇ)ಉಪನ್ಯಾಸಕ ಪಿ.ರಾಜಣ್ಣ ಹೇಳಿದರು.
ನಗರದ ಸರ್ಕಾರಿ ಉನ್ನತ ತರಬೇತಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಓದು ಅಭಿಯಾನದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಓದುವ ಅಭ್ಯಾಸವನ್ನು ತಪ್ಪದೆ ರೂಢಿಸಿಕೊಳ್ಳಬೇಕೆಂದರು.
ಡಯಟ್ ಉಪನ್ಯಾಸಕ ಎಸ್.ಬಸವರಾಜು ಮಾತನಾಡಿ, ಸೆಪ್ಟೆಂಬರ್3 ರಿಂದ 30 ರವರೆಗೆ ಜಿಲ್ಲೆಯ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 7 ನೇ ತರಗತಿಯವರೆಗೆ ಮಕ್ಕಳಲ್ಲಿ ಓದುವ ಕೌಶಲ, ಸಂಸ್ಕೃತಿ, ಪುಸ್ತಕಗಳ ಬಗ್ಗೆ ಒಲವು ಬೆಳೆಸಲು 21 ದಿನಗಳ ಓದುವ ಅಭಿಯಾನ ಆಯೋಜಿಸಲಾಗಿದೆ ಎಂದರು.
ಸಿ.ಆರ್.ಪಿ ಶ್ವೇತಾ, ಮುಖ್ಯಶಿಕ್ಷಕ ಎಸ್.ರಾಜಪ್ಪ, ಶಿಕ್ಷಕರಾದ ಭಾರತಮ್ಮ, ಸಂತೋಷ್ ಕುಮಾರ್, ವಿಜಯಲಕ್ಷ್ಮಿ, ಪಾಲಕರಾದ ರಮ್ಯ, ಕಮಲಮ್ಮ ಮತ್ತಿತರರು ಇದ್ದರು.