

ನರಗುಂದ: ಕನ್ನಡದ ಕಬೀರ, ಭಾವೈಕ್ಯದ ಕೊಂಡಿಯಂತಿದ್ದ ಇಬ್ರಾಹಿಂ ಸುತಾರ ಅವರ ಪ್ರವಚನವನ್ನು ಕೇಳದಿರುವ ಮನಸ್ಸುಗಳಿಲ್ಲ. ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ಸುತಾರ ಅವರು ತಮ್ಮ ಪ್ರವಚನದ ಮೂಲಕ ನಾಡಿನಾದ್ಯಂತ ಹಿಂದು-ಮುಸ್ಲಿಂ ಭಾವೈಕ್ಯ ಸಾರಿದ್ದಾರೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸುತಾರ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದು ಶ್ರೀಗಳು ಮಾತನಾಡಿದರು. ಭಾವೈಕ್ಯ ಪ್ರಾರ್ಥನೆಗಳಿಂದ ಕೂಡಿರುವ ‘ನಾವೆಲ್ಲರೂ ಭಾರತೀಯರು’ ಎಂಬ ಕವನ ಸಂಕಲವನ್ನು ಇಬ್ರಾಹಿಂ ಸುತಾರ ಅವರು ಹೊರತಂದಿದ್ದಾರೆ. ಅವರ ಪ್ರವಚನಗಳಲ್ಲಿ ಕೇವಲ ಅಧ್ಯಾತ್ಮ ಇರಲಿಲ್ಲ, ಬದಲಾಗಿ ಸಮಾಜಪರ ಚಿಂತನೆಗಳು ಹಾಗೂ ಜನಜಾಗೃತಿ ಮೂಡಿಸುವ ಅನೇಕ ವಿಚಾರಗಳಿರುತ್ತಿದ್ದವು ಎಂದು ತಿಳಿಸಿದರು.
ಶಿವಯ್ಯ ಹಿರೇಮಠ, ಕೊಣ್ಣೂರಿನ ಕಲಾವಿದ ಖಾನಸಾಬ್ ಮಸೂತಿಮನಿ, ಚನ್ನಪ್ಪ ಚಿನಿವಾಲರ, ಭಗವಂತ ಮೊರಬದ, ಬಸಪ್ಪ ಸಂಗಳದ, ಸಾಲಹಳ್ಳಿಯ ಶಿವಾನಂದ ಹಿರೇಮಠ ಇದ್ದರು.
ಕನ್ನಡ ಮಠದೊಂದಿಗೆ ನಂಟು: ಶ್ರೇಷ್ಠ ವಾಗ್ಮಿಗಳಾಗಿದ್ದ ಕನ್ನಡದ ಕಬೀರ ಶರಣ ಇಬ್ರಾಹಿಂ ಸುತಾರ ಅವರಿಗೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಮೇಲೆ ಅಪಾರ ಪ್ರೀತಿ, ಅಭಿಮಾನವಿತ್ತು. ಈ ಭಾಗದಲ್ಲಿ ಯಾವುದಾದರೂ ಸಭೆ-ಸಮಾರಂಭಗಳಿದ್ದರೆ ಶ್ರೀಮಠಕ್ಕೆ ಆಗಮಿಸಿ ಶ್ರೀಗಳೊಂದಿಗೆ ಕನ್ನಡಪರ ಚಿಂತನೆ, ಆಧ್ಯಾತ್ಮಿಕ ಹಾಗೂ ಪ್ರಸ್ತುತ ವಿದ್ಯಮಾನಗಳ ಕುರಿತು ಸುದೀರ್ಘವಾಗಿ ರ್ಚಚಿಸುತ್ತಿದ್ದರು. ಸುತಾರ ಅವರಿಗೆ ಉಪ್ಪಿಟ್ಟು, ಚುರುಮರಿ ಎಂದರೆ ಬಲು ಪ್ರೀತಿ. ಹೀಗಾಗಿ, ಅವರು ಶ್ರೀಮಠಕ್ಕೆ ಆಗಮಿಸಿದಾಗಲೆಲ್ಲ ಉಪ್ಪಿಟ್ಟು ಚುರಮರಿ ಸೇವಿಸಿ ಕೆಲಕಾಲ ಮಠದ ಯಾತ್ರಿ ನಿವಾಸದಲ್ಲಿ ವಿಶ್ರಮಿಸಿ ಮುಂದೆ ತಮ್ಮ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ಹಿಂದೆ ಮಠದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಬ್ರಾಹಿಂ ಸುತಾರ ಅವರು, ಭಕ್ತಿ ರಸಮಂಜರಿ (ಭಾವೈಕ್ಯ ಲಹರಿ) ಕಾರ್ಯಕ್ರಮ ನಡೆಸಿಕೊಟ್ಟಿದ್ದು ಚಿರಸ್ಮರಣೀಯ. ಇಂತಹ ಶ್ರೇಷ್ಠ ಚಿಂತಕರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಎಂದು ಶಾಂತಲಿಂಗ ಶ್ರೀಗಳು ಕಂಬನಿ ಮಿಡಿದಿದ್ದಾರೆ.