ಭಾವೈಕ್ಯತೆಗೆ ಸದ್ಭಾವನೆ, ಸೌಹಾರ್ದ ಅಗತ್ಯ:  ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಹೇಳಿಕೆ

06.02.2021 SDLP 02
Published on

ಶಿಡ್ಲಘಟ್ಟ : ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಯಲ್ಲಿ ಸೌಹಾರ್ದತೆ, ಸದ್ಭಾವನೆ ಮೂಡುವುದರಿಂದ ರಾಷ್ಟ್ರದಲ್ಲಿ ಭಾವೈಕ್ಯತೆ ದೃಢಗೊಳ್ಳುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಸುಗಟೂರುವಿನಲ್ಲಿ ತ್ರಿಪುರ ಯುವ ವಿಕಾಸಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್‌ಬಹುಗುಣ ಇಕೋ ಕ್ಲಬ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸದ್ಭಾವನಾಯಾತ್ರೆಯ ಮೆರವಣಿಗೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಸುಗಟೂರು ಗ್ರಾಮವು ಧಾರ್ಮಿಕ, ಐತಿಹಾಸಿಕವಾಗಿ ಪ್ರಸಿದ್ಧವಾಗಿದ್ದು ತ್ರಿಪುರದ ನಿಯೋಗಕ್ಕೆ ಭೇಟಿ ನೀಡಲು ರಾಜ್ಯದಿಂದ ಇದೇ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ಸೂಕ್ತವಾಗಿದೆ. ತ್ರಿಪುರ ರಾಜ್ಯದ ಸದ್ಭಾವನಾ ಯಾತ್ರೆಯು ರಾಜ್ಯದಲ್ಲಿ ಕೇವಲ ಎರಡು ಸ್ಥಳಗಳಿಗೆ ಭೇಟಿನೀಡುತ್ತಿದ್ದು ಆ ಪೈಕಿ ನಮ್ಮ ಜಿಲ್ಲೆಯ ಸುಗಟೂರು ಗ್ರಾಮ ಒಂದು ಆಗಿರುವುದು ಸಂತಸ ತಂದಿದೆ. ಇಲ್ಲಿನ ಸಂಸ್ಕೃತಿ, ಕಲೆ, ಧಾರ್ಮಿಕ ಅಂಶಗಳು ತ್ರಿಪುರ ರಾಜ್ಯದಲ್ಲಿ ಸದ್ಭಾವನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬಿಂಬಿತವಾಗಲಿವೆ ಎಂದರು.

ಒರಿಸ್ಸಾದ ಗಾಂಧಿವಾದಿ ಮಧುಸೂದನ್ ದಾಸ್ ಮಾತನಾಡಿ, ಎಲ್ಲರೂ ಭಾವೈಕ್ಯ, ಸೌಹಾರ್ದತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಹಿಂಸಾಚರಕ್ಕೆ ಅವಕಾಶವಿಲ್ಲದೆ ಎಲ್ಲವನ್ನೂ ಸಮಾಲೋಚನೆ ಮೂಲಕ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ತ್ರಿಪುರ ರಾಜ್ಯದ ಸದ್ಭಾವನಾ ಯಾತ್ರೆಯ ಸಂಚಾಲಕ ಡೆಬಾಸಿಸ್ ಮಜುಂದಾರ್, ತೆಲಂಗಾಣದ ರಾಷ್ಟ್ರೀಯ ಯುವಯೋಜನೆ ಅಧ್ಯಕ್ಷ ಕೆ.ಯಾದವರಾಜು, ಸುಂದರಲಾಲ್ ಇಕೋಕ್ಲಬ್ ಸಂಚಾಲಕ ಎಚ್.ಎಸ್.ರುದ್ರೇಶಮೂರ್ತಿ, ರಾಷ್ಟ್ರೀಯ ಯುವಯೋಜನೆಯ ರಾಜ್ಯಸಂಯೋಜಕ ವಿ.ಪ್ರಶಾಂತ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯ ನಾರಾಯಣಸ್ವಾಮಿ, ಗ್ರಾಮಪಂಚಾಯಿತಿ ಸದಸ್ಯ ಸತೀಶ್ ಅಧ್ಯಕ್ಷ ಎ.ಎಂ.ತ್ಯಾಗರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net