

ಚಿಟಗುಪ್ಪ: ಚಾಂಗಲೇರಾ ಶ್ರೀ ವೀರಭದ್ರೇಶ್ವರ ಜಾತ್ರಾ ಉತ್ಸವ ಭಕ್ತಿ, ಭಾವೈಕತೆ ಭಾವೈಕ್ಯತೆ ಮೂಡಿಸುವ ವಿಶೇಷ ತಾಣವಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ಚಾಂಗಲೇರಾದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿ ಹಾಗೂ ಸಂಗೀತ ದರ್ಬಾರ್ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೆಯು ಒಂದಾಗಿದೆ. ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿ ವಿಶೇಷ ಒತ್ತು ನೀಡಲಾಗುತ್ತಿದ್ದು, ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಸ್ಥಳೀಯ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ವೀರಭದ್ರೇಶ್ವರ ದೇವರಲ್ಲಿ ನಂಬಿಕೆ ಇಟ್ಟು ಬರುವವರಿಗೆ ಇಷ್ಟಾರ್ಥ ಸಿದ್ಧಿಸಲಿದೆ ಎಂದರು.
ನಾಲವಾರದ ಡಾ.ಸಿದ್ಧ ತೋಟೆಂದ್ರ ಶಿವಾಚಾರ್ಯರು, ಇಟಗಾ ಮುಕ್ತಿ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಸ್ವಂತದ ಶ್ರೀ ಶಂಕರಲಿಂಗ ಮಹಾರಾಜ, ಚಾಂಗಲೇರಾದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಕಲ್ಲೂರದ ಶ್ರೀ ಮೃತ್ಯುಂಜಯ ಶಿವಾಚಾರ್ಯರು, ಹಲಬರ್ಗಾದ ಶ್ರೀ ಹಾವಲಿಂಗ ಶಿವಾಚಾರ್ಯರು ಸೇರಿ ಹಲವಾರು ಮಠಾಧೀಶರು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ ಕುಲಕರ್ಣಿ, ಪ್ರಮುಖರಾದ ಶಿವರಾಜ ಪಾಟೀಲ್, ಗುರುನಾಥ ರಾಜಗೀರಾ, ವಿಜಯಕುಮಾರ ವಾಲಿ, ನರೇಶ ಥೊಂಟೆ, ಲಾಲಪ್ಪ ಕೋರಿ, ಚಂದ್ರಯ್ಯ ಸ್ವಾಮಿ, ಬಸವರಾಜ ಚಟನಳ್ಳಿ, ವೀರಶೆಟ್ಟಿ ಕಲ್ಲೂರ, ಪಪ್ಪು ಸ್ವಾಮಿ, ಡಾ.ರೇವಣಸಿದ್ದಯ್ಯ ಪೂಜಾರಿ, ರಾಜು ಮಳ್ಳಿ, ರವೀಂದ್ರ ಘಾರೇಲ್ ಇತರರಿದ್ದರು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಅಗ್ನಿ ತುಳಿದ ಸಹಸ್ರಾರು ಭಕ್ತರು: ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದ ಅಗ್ನಿ ಕುಂಡದಲ್ಲಿ ಬುಧವಾರ ಅಪಾರ ಸಂಖ್ಯೆಯ ಭಕ್ತರು ಅಗ್ನಿ ತುಳಿದು ದೇವರ ದರ್ಶನ ಪಡೆದರು. ಮಂಗಳವಾರ ರಾತ್ರಿ ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವ ಅಗ್ನಿ ಕುಂಡಕ್ಕೆ ಬೆಳಗಿನ ಜಾವ ತಲುಪಿತು. ರಸ್ತೆ ಉದ್ದಕ್ಕೂ ಭಜನೆ, ಡೊಳ್ಳು ಕುಣಿತ, ಪುರವಂತರ ಸೇವೆ ಸೇರಿ ವಿಶೇಷ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆದವು. ಅಲ್ಲಿ ದೇವರ ಅಗ್ನಿ ತುಳಿಯುವ ಕಾರ್ಯ ಮುಗಿಯುತ್ತಿದ್ದದಂತೆ, ಬುಧವಾರ ಬೆಳಗ್ಗಿನ ಜಾವದಿಂದ ಸಂಜೆವರೆಗೆ ಭಕ್ತರು ಅಗ್ನಿ ತುಳಿದು ದೇವರ ದರ್ಶನ ಪಡೆದರು. ಇಲ್ಲಿನ ವಾಡಿಕೆ ಯಂತೆ ಪುಷ್ಕರಣಿಯಲ್ಲಿ ಭಕ್ತರು ಮಿಂದೆದ್ದು, ಮಡಿಯಿಂದ ಅಗ್ನಿ ತುಳಿಯುವುದು ವಿಶೇಷವಾಗಿದೆ.
ಶ್ರೀ ವೀರಭದ್ರೇಶ್ವರ ರಥ ಕಬ್ಬಿಣದಾಗಿದ್ದು, ದೇವಸ್ಥಾನಕ್ಕೆ ತಕ್ಕಂತೆ ಸಾಗುವನಿಯ ರಥ ಆಗಬೇಕೆಂಬ ಉದ್ದೇಶವಾಗಿದ್ದು, ಇದಕ್ಕೆ ಎಲ್ಲ ಪೂಜ್ಯರ ಸಮ್ಮತಿ, ಭಕ್ತರು ಸಹಕಾರ ನೀಡಬೇಕು. ಭಕ್ತರೊಬ್ಬರು ದೇವಸ್ಥಾನ ಆವರಣದಲ್ಲಿ ನೂತನ ಪುಷ್ಕರಣಿ ನಿರ್ಮಿಸಲು ಮುಂದೆ ಬಂದಿದ್ದಾರೆ. ಯಾತ್ರಿ ನಿವಾಸ, ಬಸ್ ನಿಲ್ದಾಣ ಮತ್ತಿತರರ ಕಾರ್ಯಗಳು ಪ್ರಗತಿಯಲ್ಲಿವೆ. ಒಟ್ಟಿನಲ್ಲಿ ದೇವಸ್ಥಾನ ಮಾದರಿಯಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
| ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ