

ಚಿತ್ರದುರ್ಗ: ಜಾತಿ-ಧರ್ಮಗಳ ನಡುವೆ ಕಂದಕ, ಸಂಘರ್ಷ ಸೃಷ್ಟಿಸುವವರು ಸಂವಿಧಾನ ಬದಲಿಸಿದರು ಅಚ್ಚರಿಯಿಲ್ಲ. ಆದ್ದರಿಂದ ಭಾವೈಕ್ಯ ಸಾರುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಸಲಹೆ ನೀಡಿದರು.
ಪತ್ರಿಕಾ ಭವನದಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ಗುರುವಾರ ನಡೆದ ದೇಶದ ಪ್ರಥಮ ಶಿಕ್ಷಣ ಸಚಿವ
ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೋಮುಸೌಹಾರ್ದ ಕದಡುವ ಕೆಲಸಕ್ಕೆ ಯಾರೂ ಯತ್ನಿಸಬಾರದು. ಸಂತ ಶ್ರೇಷ್ಠ ಕನಕದಾಸರು ಸೇರಿ ದಾರ್ಶನಿಕರು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದು, ಸರ್ವ ಕಾಲಕ್ಕೂ ಪ್ರಸ್ತುತವಾಗಿದೆ. ಆದ್ದರಿಂದ ಮಾನವರಾಗಿ, ಮಾನವೀಯ ಮೌಲ್ಯಗಳೊಂದಿಗೆ ಬದುಕಲು ಮುಂದಾಗಬೇಕಿದೆ ಎಂದು ಹೇಳಿದರು.
ಬಿಜೆಪಿಗರು ದೇವರು-ಧರ್ಮದ ಹೆಸರಿನಲ್ಲಿ ರಾಜಕೀಯ ಮುಂದುವರೆಸಿದ್ದು, ದೇಶದೊಳಗೆ ಸರ್ವ ಜನಾಂಗದವರೂ ಶಾಂತಿಯಿಂದ ಬದುಕಲು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ, ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ನಿವೃತ್ತ ಪ್ರಾಚಾರ್ಯ ಜೆ.ಯಾದವರೆಡ್ಡಿ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ನೂತನ
ಸವಾಲುಗಳನ್ನು ಒಡ್ಡುತ್ತಿರುವ ಇಂದಿನ ದಿನಗಳಲ್ಲಿ ಮುಸ್ಲಿಂ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿರುವುದು
ನೋವಿನ ಸಂಗತಿ. ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಅಕಾಡೆಮಿ ಗೌರವಾಧ್ಯಕ್ಷ ಬಿ.ಕೆ.ರಹಮತ್ ಉಲ್ಲಾ, ಅಧ್ಯಕ್ಷ ಎಂ.ಹನೀಫ್, ಕಾರ್ಯಾಧ್ಯಕ್ಷ ಎ.ಎಚ್.ಅಬ್ದುಲ್ಲಾ, ಉಪಾಧ್ಯಕ್ಷ ನಿಸಾರ್ ಅಹಮ್ಮದ್, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಿದ್ದೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಮುಖಂಡರಾದ ಎಚ್.ಆರ್.ಮಹಮ್ಮದ್, ಚೋಟು, ಕೆ.ಯಕ್ಬಾಲ್, ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ.ಜಾಕೀರ್‌ಹುಸೇನ್, ಡಿ.ಕುಮಾರ್ ಇತರರಿದ್ದರು.