

ಎನ್.ಆರ್.ಪುರ: ತಾಲೂಕು ಭಾವಸಾರ ಕ್ಷತ್ರಿಯ ಸಮಾಜದಿಂದ ಒಂದು ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸಂಘದ ನಿರ್ದೇಶಕರ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾರ್ಯದರ್ಶಿ ಜಿ.ಆರ್.ಜ್ಞಾನೇಶ್ ಹೇಳಿದರು.
ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯರ ಸಭೆಯಲ್ಲಿ ಮಾತನಾಡಿ, ಭಾವಸಾರ ಕ್ಷತ್ರಿಯ ಸಮಾಜಕ್ಕೆ ನಿವೇಶನ ಇರಲಿಲ್ಲ. ಸಮಾಜದ ಸದಸ್ಯರ ಸಹಕಾರ ಹಾಗೂ ಹಲವು ದಾನಿಗಳ ನೆರವಿನಿಂದ 14 ಲಕ್ಷ ರೂ. ಗೂ ಅಧಿಕ ವೆಚ್ಚದಲ್ಲಿ ನಿವೇಶನ ಖರೀದಿಸಲಾಗಿದೆ. ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಮುದಾಯ ಭವನ ನಿರ್ಮಾಣಕ್ಕೆ ಅನುದಾನದ ಕೊರತೆಯಿತ್ತು. ರಾಜ್ಯ ಪ್ರವಾಸೋದ್ಯಮ ಅಭಿವದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಇದರಲ್ಲಿ ಮೊದಲ ಕಂತು 6.25 ಲಕ್ಷ ರೂ. ಸಮಾಜದ ಬ್ಯಾಂಕ್ ಖಾತೆಗೆ ಪಾವತಿ ಆಗಿದೆ ಎಂದು ಮಾಹಿತಿ ನೀಡಿದರು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ವೆಂಕಟೇಶ್ ಮಾತನಾಡಿ, ಸಮುದಾಯ ಭವನದ ಶಂಕುಸ್ಥಾಪನೆಯನ್ನು ೆ.9ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಭಾವಸಾರ ಕ್ಷತ್ರಿಯ ಮಹಿಳಾ ಸಮಾಜದ ಅಧ್ಯಕ್ಷೆ ರೀನಾ ಮೋಹನ್ ಮಾತನಾಡಿ, ಸಮುದಾಯ ಭವನದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಭಾವಸಾರ ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಗೋಪಾಲ್, ಖಜಾಂಚಿ ಡಿ.ಜಿ.ಶ್ರೀನಿವಾಸ್, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಮಮತಾ ನಾಗರಾಜ್, ಕಾರ್ಯದರ್ಶಿ ರಶ್ಮಿ ಇದ್ದರು.