

ಶೃಂಗೇರಿ: ಕನ್ನಡ ಭಾಷೆಯನ್ನು ಬೆಳೆಸಿದವರು ಗ್ರಾಮೀಣ ಭಾಗದ ಜನರು. ಅವರು ಮಾತನಾಡುವ ಭಾಷೆಯ ಸೊಗಡುತನ ಭಾಷೆಯ ಮೌಲ್ಯ ಹೆಚ್ಚಿಸುತ್ತದೆ ಎಂದು ವಾಗ್ಮಿ ಜಿ.ಎಸ್.ನಟೇಶ್ ಕಾಸರವಳ್ಳಿ ತಿಳಿಸಿದರು.
ಶನಿವಾರ ನುಡಿನಿತ್ಯೋತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ನಮ್ಮಭಾಷೆ ಹಾಗೂ ನಮ್ಮತನವನ್ನು ಎಂದಿಗೂ ಬಿಟ್ಟುಕೊಡಬಾರದು. ಆಂಗ್ಲ ಭಾಷೆ ವ್ಯಾಮೋಹಕ್ಕೆ ಒಳಗಾದವರು ಕನ್ನಡದ ಒತ್ತಕ್ಷರ ಹಾಗೂ ಉಚ್ಛಾರಣೆಯನ್ನು ತಪ್ಪಾಗಿ ಹೇಳುತ್ತಿದ್ದಾರೆ ಎಂದರು.
ಆಂಗ್ಲ ಭಾಷೆ ಉದ್ಯೋಗಕ್ಕಾಗಿ ಅನಿವಾರ್ಯ. ಆದರೆ ನಮ್ಮ ಭಾಷೆ ಭಾವನಾತ್ಮಕ ಸಂಬಂಧ ಬೆಸೆಯುವ ಇರುವ ಅಪರೂಪದ ಮೌಲ್ಯ. ತಾಯಿಬೇರನ್ನು ಯಾರೂ ಮರೆಯಬಾರದು. ಕನ್ನಡ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಕುವೆಂಪು, ದ.ರಾ.ಬೇಂದ್ರೆ, ಡಿವಿಜಿ ಅಂತಹ ಶ್ರೇಷ್ಠ ಸಾಹಿತಿಗಳು ಕನ್ನಡಭಾಷೆಗೆ ಮಹತ್ವದ ಉಡುಗೊರೆ ನೀಡಿದ್ದಾರೆ. ಸಾಹಿತ್ಯ ಹಾಗೂ ಕಾವ್ಯಗಳು ನಮ್ಮೊಳಗೆ ಪ್ರಜ್ಞಾನ ಬೆಳೆಸುತ್ತವೆ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪವನ್ ಮಾತನಾಡಿ, ನಮ್ಮ ಭಾವನೆಗಳಿಗೆ ಸ್ಪಷ್ಟ ಸ್ವರೂಪ ನೀಡುವ ಕನ್ನಡ ಸಂಬಂಧಗಳನ್ನು ಉಳಿಸುತ್ತದೆ. ಮಾನವೀಯ ಮೌಲ್ಯವನ್ನು ಬೆಳೆಸುತ್ತಿದೆ. ಶೃಂಗೇರಿ ತಾಲೂಕಿನಲ್ಲಿ ಮೂರು ವರ್ಷಗಳಿಂದ ನಡೆಸುತ್ತಿರುವ ನುಡಿನಿತ್ಯೋತ್ಸವ ಜಿಲ್ಲೆಗೆ ಮಾದರಿ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದರಾವ್, ಸುನೀತಾ ನವೀನ್, ಜಿಲ್ಲಾ ಕಸಾಪ ಸಂಚಾಲಕ ಆಗುಂಬೆ ಗಣೇಶ್ ಹೆಗ್ಗಡೆ, ತಾಲೂಕು ಹೋಬಳಿ ಅಧ್ಯಕ್ಷರಾದ ಮಂಜುನಾಥ್ ನಾಯ್ಕ, ದಿನೇಶ್ ಅಂಗುರ್ಡಿ, ವಿದ್ಯಾರಣ್ಯಪು ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಇದ್ದರು.