

ಶೃಂಗೇರಿ: ಭಾವಗೀತೆಗಳು ನಮ್ಮನ್ನು ಸುಸಂಸ್ಕೃತವಾಗಿಸುತ್ತವೆ ಎಂದು ಪೊಲೀಸ್ ಉಪಠಾಣಾಧಿಕಾರಿ ಮೋಹನ್ ರಾಜಣ್ಣ ಹೇಳಿದರು.
ಸಚ್ಚಿದಾನಂದಪುರದಲ್ಲಿ ಗಾನಸಿರಿ ಮ್ಯೂಸಿಕಲ್ಸ್ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಭಾವಗೀತೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಮನಸ್ಸಿನ ಭಾವನೆ ಮೂರ್ತರೂಪ ಪಡೆದು ರಾಗ, ತಾಳ, ಲಯಬದ್ಧವಾಗಿ ಹೊರ ಹೊಮ್ಮಿದಾಗ ಭಾವಗೀತೆ ಸೃಷ್ಟಿಯಾಗುತ್ತದೆ. ಭಾವಗೀತೆಯನ್ನು ಕೇಳುತ್ತ ಅದರ ಅರ್ಥ ಅರಿತಾಗ ನಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ ಎಂದರು.
ಬಿಎಂಶ್ರೀ ಅವರ ಆಂಗ್ಲ ಗೀತೆಗಳ ತರ್ಜುಮೆ, ಕೆ.ಎಸ್.ನರಸಿಂಹಸ್ವಾಮಿ, ಕುವೆಂಪು, ಬೇಂದ್ರೆ, ವಿಸಿ ಮುಂತಾದ ಕವಿಗಳಿಂದ ಬೆಳೆದು ಕಾವ್ಯರಸಿಕರ ಮನಸ್ಸನು ಆವರಿಸಿಕೊಂಡು ಕನ್ನಡದಲ್ಲಿ ಭಾವಗೀತೆ ಸಾಹಿತ್ಯ ಪ್ರಾಕಾರವನ್ನು ಸಮೃದ್ಧಿಗೊಳಿಸಿದೆ ಎಂದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಅಚಲಾ(ಪ್ರ), ಜ್ಞಾನಭಾರತೀ ಶಿಕ್ಷಣ ಸಂಸ್ಥೆಯ ಪೂರ್ಣಶ್ರೀ ಭಟ್ (ದ್ವಿ) ಮತ್ತು ಜೇಸೀಸ್ ಶಾಲೆ ಅನ್ವಿತಾ ತೃತೀಯ ಸ್ಥಾನ ಪಡೆದರು.
ಶಾಲಾ ಸಮಿತಿಯ ಡಾ. ಲಕ್ಷ್ಮೀನಾರಾಯಣ, ಡಾ. ಅಣ್ಣಾದೊರೈ, ಹೆಗ್ಗದ್ದೆ ಶಿವಾನಂದರಾವ್, ಇಂದಿರಾ ವೈದ್ಯೆ ಇತರರಿದ್ದರು.