

ಬಸವಕಲ್ಯಾಣ: ಜಾತ್ರೆ, ಉತ್ಸವಗಳು ಎಲ್ಲರ ಮನಸ್ಸನ್ನು ಒಂದುಗೂಡಿಸುವ ಜತೆಗೆ ಭಾವೈಕ್ಯತೆ ಗಟ್ಟಿಗೊಳಿಸಲು ಸಹಕಾರಿಯಾಗುತ್ತವೆ ಎಂದು ಹಾರಾಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಘಾಟ ಹಿಪ್ಪರಗಾ ತಾಂಡಾದ ಶ್ರೀ ದುರ್ಗಾದೇವಿಯ ೮೪ನೇ ಜಾತ್ರೋತ್ಸವ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಯಾವುದೇ ಭೇದ ಭಾವವಿಲ್ಲದೆ ದೇವರ ಹೆಸರಿನಲ್ಲಿ ಎಲ್ಲರೂ ಒಂದಾಗಿ ಭಾವ ಶುದ್ಧಿಯಿಂದ ಮಾಡುವ ಆರಾಧನೆ ಹಾಗೂ ಸಂಭ್ರಮಾಚರಣೆಯ ಶುಭ ಸಂದರ್ಭವೇ ಜಾತ್ರೆ ಎಂದು ಹೇಳಿದರು.
ಇಳೆ, ಬೆಳೆ, ಗಾಳಿ, ನೀರು ಎಲ್ಲವೂ ದೇವರು ಕೊಡ ಮಾಡಿದ ಭಾಗ್ಯವಾಗಿದ್ದು, ಆತನಿಗೆ ಕೃತಜ್ಞರಾಗಿರುವುದು ನಮ್ಮ ಧರ್ಮವಾಗಿದೆ. ದುರ್ಗಾ ಮಾತೆ ಶಕ್ತಿಯ ಪ್ರತೀಕವಾಗಿದ್ದು, ನಮ್ಮ ಬದುಕಿನಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಕಷ್ಟ, ನಷ್ಟ, ಅವಘಡಗಳನ್ನು ಸಮರ್ಥವಾಗಿ, ಸಮಚಿತ್ತದಿಂದ ಎದುರಿಸಿ ಅವುಗಳಿಂದ ಮುಕ್ತಿ ಹೊಂದುವತೆ ಪ್ರಾರ್ಥಿಸಿದರೆ ದೇವಿ ಎಂತಹ ಸಂದರ್ಭದಲ್ಲೂ ನಮ್ಮ ಕೈ ಬಿಡುವುದಿಲ್ಲ ಎಂದರು.
ಶ್ರೇಷ್ಠ ಸಂತ ಸೇವಾಲಾಲರ ಮಾರ್ಗದರ್ಶನದಲ್ಲಿ ನಡೆಯುವ ಬಂಜಾರ ಸಮಾಜ ದೈವ ಭಕ್ತಿಯಲ್ಲಿ ಎತ್ತಿದ ಕೈ ಎಂದೇ ಹೇಳಬೇಕಾಗುತ್ತದೆ. ದುರ್ಗಾಮಾತೆಯ ಅನುಗ್ರಹದಿಂದ ಹಾರಕೂಡದ ಲಿಂ.ಚನ್ನಬಸವ ಶಿವಯೋಗಿಗಳ ಕೃಪೆಯಿಂದ ಎಲ್ಲರ ಬಾಳು ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಅಂಕೋಶ ಚವ್ಹಾಣ್, ರಾಜಕುಮಾರ ರಾಠೋಡ, ಮನೋಹರ ರಾಠೋಡ, ರಾಜು ಚವ್ಹಾಣ್, ಅಪ್ಪಣ್ಣ ಜನವಾಡ ಇತರರಿದ್ದರು. ಹಿರಾಸಿಂಗ್ ಸ್ವಾಗತಿಸಿದರು. ಡಾಕುಸಿಂಗ್ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.