ಭಾಲ್ಕಿ ಮಠದಿಂದ ಕನ್ನಡ ಸಂರಕ್ಷಣೆ

23blk4
ಕರಡ್ಯಾಳ ಗುರುಕುಲದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಆನಂದರಾಜ ಪ್ರಭು, ಡಾ.ಗೀತಾ ಖಂಡ್ರೆ, ರೇಷ್ಮಾ ಕೌರ್, ಅನಂತ ಬಿರಾದಾರ್, ಡಾ.ಕಲ್ಯಾಣರಾವ ಪಾಟೀಲ್, ಡಾ.ಜಗನ್ನಾಥ ಹೆಬ್ಬಾಳೆ, ಸುರೇಶ ಚನ್ನಶೆಟ್ಟಿ ಇತರರಿದ್ದರು.
Published on

ಭಾಲ್ಕಿ: ಗಡಿ ಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ಅನನ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಱ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ಶನಿವಾರ ಆಯೋಜಿಸಿದ್ದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನಡೆದು ಬಂದ ದಾರಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಿಜಾಮ್ ಆಳ್ವಿಕೆಯಲ್ಲಿ ಲಿಂಗೈಕ್ಯ ಶತಾಯುಷಿ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಹೊರಗಡೆ ಉರ್ದು ಬೋರ್ಡ್ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಭಾಷಾಭಿಮಾನ ಮೆರೆದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

ಸ್ವತಂತ್ರಪೂರ್ವ ಮತ್ತು ನಂತರದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಈ ಭಾಗವನ್ನು ಬೆಳಗಿಸುವಂಥ ಕೆಲಸ ಮಾಡಿದ್ದಾರೆ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಹ ಹಿರಿಯ ಪೂಜ್ಯರ ದಾರಿಯಲ್ಲಿ ನಡೆದು ಬಡವರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಆದರ್ಶಪ್ರಾಯರಾಗಿದ್ದಾರೆ. ವಚನ ಸಾಹಿತ್ಯವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.

ವಚನ ಸಾಹಿತ್ಯದಲ್ಲಿ ಅದ್ಭುತ ಶಕ್ತಿ ಅಡಗಿದೆ. ದೇವರಿಗೆ ಕನ್ನಡ ಭಾಷೆ ಕಲಿಸಿದ ಹಿರಿಮೆ ೧೨ನೆಯ ಶತಮಾನದ ವಚನಕಾರರಿಗೆ ಸಲ್ಲುತ್ತದೆ. ಇಂದಿನ ೨೧ನೆಯ ಶತಮಾನಕ್ಕೆ ವಚನ ಸಾಹಿತ್ಯ ಮಾರ್ಗದರ್ಶಿಯಾಗಬೇಕಿದೆ. ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಹೆಚ್ಚಿದ್ದು, ಕನ್ನಡ ದಯನೀಯ ಸ್ಥಿತಿಗೆ ತಲುಪಿದೆ. ಇದು ಹೀಗೇ ಮುಂದುವರಿದರೆ ಎರಡ್ಮೂರು ದಶಕಗಳಲ್ಲಿ ಕನ್ನಡ ಕೇವಲ ಮಾತನಾಡುವ ಭಾಷೆಯಾಗಿ ಉಳಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ಇದುವರೆಗೆ ೨೫೦ ಭಾಷೆಗಳು ಅಸ್ತಿತ್ವ ಕಳೆದುಕೊಂಡಿವೆ. ಅನ್ಯ ಭಾಷೆಗಳು ವೇಗವಾಗಿ ಬೆಳೆಯುತ್ತಿವೆ. ರಾಜ್ಯದಲ್ಲಿ ಆಂಗ್ಲ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದರಿಂದ ಕನ್ನಡ ಭಾಷೆ ಬೆಳವಣಿಗೆ ಕುಸಿಯುತ್ತಿದೆ. ಹೀಗಾಗಿ ಕನ್ನಡ ಉಳಿಯಬೇಕಾದರೆ ಸರ್ಕಾರ ರಾಜ್ಯ ಶಿಕ್ಷಣ ನೀತಿ ತರಬೇಕು. ಈ ನಿಟ್ಟಿನಲ್ಲಿ ಪೂಜ್ಯರು ಕೂಡ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಧ್ವನಿ ಎತ್ತಬೇಕು ಎಂದು ಕೋರಿದರು.

ಶ್ರೀ ಡಾ.ಬಸವಲಿಂಗ ಪಟ್ಟದದ್ಏವರು, ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ, ನವದೆಹಲಿ ಸೂರ್ಯ ಫೌಂಡೇಷನ್ ಅಧ್ಯಕ್ಷ ಅನಂತ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.

ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಶ್ರೀ ಆನಂದರಾಜ ಪ್ರಭು, ಶಾಂತಿವರ್ಧಕ ಶಿಕ್ಷಣ ಸಂಸ್ಥೆ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರೇಷ್ಮಾ ಕೌರ್, ಹಿರಿಯ ಸಾಹಿತಿ ಜಗನ್ನಾಥ ಹೆಬ್ಬಾಳೆ ಇತರರಿದ್ದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ರಾಜು ಜುಬರೆ ವಂದಿಸಿದರು.

ಪಟ್ಟದ್ದೇವರು ಶರಣ ತತ್ವದ ಕುಸುಮ: ಗಡಿಭಾಗದಲ್ಲಿ ಸರ್ವ ಸಮಾನತೆ ಸ್ಥಾಪಿಸಲು ದಿಟ್ಟ ಹೆಜ್ಜೆ ಇಟ್ಟ ಮಠ ಭಾಲ್ಕಿಯ ಹಿರೇಮಠ. ಹಿರಿಯ ಸ್ವಾಮೀಜಿ ಆಗಿರುವ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶರಣ ತತ್ವದ ಕುಸುಮ ಆಗಿದ್ದಾರೆ ಎಂದು ಸಾಹಿತಿ ಸೋಮನಾಥ ಯಾಳವಾರ ಬಣ್ಣಿಸಿದರು. ವಿಚಾರ ಸಂಕಿರಣದಲ್ಲಿ ಶ್ರೀಗಳ ಜೀವನ ಸಾಧನೆ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಮಾಗಿದ್ದು ಬಾಗುತ್ತದೆ ಎಂಬ ಮಾತಿಗೆ ಪರಿಪೂರ್ಣ ಹೋಲಿಕೆ ಆಗುವವರು ಶ್ರೀ ಪಟ್ಟದ್ದೇವರು. ಓದಿದವರು ದಣಿಯುವಷ್ಟು, ತಣಿಯುವಷ್ಟು ಸಾಧನೆಯನ್ನು ಪೂಜ್ಯರು ಮಾಡಿದ್ದಾರೆ ಎಂದರು. ಕಲಬುರಗಿ ಪ್ರಗತಿಪರ ಚಿಂತಕ ಆರ್.ಕೆ. ಹುಡುಗಿ ಮಾತನಾಡಿ, ಮಾತೃಭಾಷೆ ಬಗ್ಗೆ ನಮಗೆ ಅಪಾರ ಗೌರವ, ಪ್ರೀತಿ ಇರಬೇಕು. ಕನ್ನಡ ಭಾಷೆ ನಮ್ಮ ತಾಯಿ, ಆಂಗ್ಲ ಗೆಳತಿ ಆಗಿರಬೇಕು ಎಂದು ಹೇಳಿದರು. ಸಿದ್ದಪ್ಪ ಮೂಲಗೆ ಮಾತನಾಡಿ, ಜನಮುಖಿಯಾಗಿರುವ ಕೆಲವೇ ಕೆಲ ಮಠಾಧೀಶರಲ್ಲಿ ಪಟ್ಟದ್ದೇವರು ಒಬ್ಬರು. ಇವರು ಸಾಕಷ್ಟು ನೋವು, ಅಪಮಾನ, ಬಡತನವನ್ನು ಅನುಭವಿಸಿ ಮಠವನ್ನು ಬೆಳೆಸಿರುವ ರೀತಿ ಮಾದರಿಯಾಗಿದೆ ಎಂದು ಕೊಂಡಾಡಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ ವಸದ, ದಾಸ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾಲಾಜಿ ಅಮರವಾಡಿ ಇದ್ದರು.

ಪಟ್ಟದ್ದೇವರು ಕಾರ್ಯ ಪ್ರಶಂಸನೀಯ: ಕನ್ನಡ ಬಾರದ ತೆಲುಗು ನಿವಾಸಿಗಳಿಗಾಗಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ವಚನಗಳನ್ನು ಅನುವಾದಿಸುವ ಮೂಲಕ ತಾವು ಬರೆದ ಮತ್ತು ಇತರರ ಅನೇಕ ಮೌಲಿಕ ಕೃತಿಗಳನ್ನು ತೆಲುಗು ಭಾಷೆಗೆ ಅನುವಾದಿಸುವ ಮುಖಾಂತರ ಬಸವತತ್ವವನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಲಿಂಗಣ್ಣ ಗೊನಾಳ ಹೇಳಿದರು. ಬಸವತತ್ವ ಸಾರ್ವಕಾಲಿಕ ಮಾಡುವಲ್ಲಿ ಪೂಜ್ಯರ ಕೊಡುಗೆಯ ೨ನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರ ಚಿಂತನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ನಿಟ್ಟಿನಲ್ಲಿ ಪ್ರವಚನ, ನಾಟಕ, ಬಸವ ಸಂದೇಶ ಯಾತ್ರೆ ಮೂಲಕ ಅವಿರತ ಪ್ರಯತ್ನ ಮಾಡುತ್ತಿರುವ ರೀತಿ ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಧಾರವಾಡದ ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲ್ ಮಾತನಾಡಿ, ಬಸವಣ್ಣ ಜಾತಿ ವ್ಯವಸ್ಥೆ ತೊಲಗಿಸಿ ಸಮಸಮಾಜ ನಿರ್ಮಿಸಲು ಶ್ರಮಿಸಿದ್ದ ಮಹಾನ್ ದಾರ್ಶನಿಕ. ವೈದಿಕ ಚಿಂತನೆ, ಆಚರಣೆಗಳಿಗೆ ಪರ್ಯಾಯ ಧರ್ಮವೇ ಶರಣ ಧರ್ಮ. ಲಿಂಗಾಯತ ಧರ್ಮ ಹುಟ್ಟಲೇ ಇಲ್ಲ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಲಾತೂರ್‌ನ ಪ್ರಗತಿಪರ ಚಿಂತಕ ರಾಜಶೇಖರ ಸೋಲಾಪುರೆ ಉಪನ್ಯಾಸ ಮಂಡಿಸಿದರು. ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ. ಜನವಾಡಕರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ಶಂಭುಲಿಂಗ ಕಾಮಣ್ಣ, ಆದಿವಾಸಿ ಸಾಹಿತ್ಯ ಪರಿಷತ್ ಜಿಲ್ಲಾಧಕ್ಷ ವಿಜಯಕುಮಾರ ಡುಮ್ಮೆ, ಸಾಂಗ್ಲಿಯ ಸುಭಾಷ ಪಾಟೀಲ್, ಜವಾಹರ ಚನಶೆಟ್ಟಿ ಇದ್ದರು. ಲಕ್ಷ್ಮಣ ಮೇತ್ರೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net