ಭಾಲ್ಕಿ ಗುಡಿಸಲುಮುಕ್ತ ತಾಲೂಕು ಗುರಿ

1blk1
 ಭಾಲ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಸಮೀಪದಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನೆ ಮಂಜೂರಾತಿ ತಿಳಿವಳಿಕೆ ಪತ್ರ ವಿತರಿಸಿದರು. ಸಂಸದ ಸಾಗರ ಖಂಡ್ರೆ ಇತರರಿದ್ದರು.
Published on

ಭಾಲ್ಕಿ: ತಾಲೂಕನ್ನು ಗುಡಿಸಲು ಮುಕ್ತನಾಗಿ ಮಾಡುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದ ಸಮೀಪ ಭಾನುವಾರ ಆಯೋಜಿಸಿದ್ದ ವಿವಿಧ ವಸತಿ ಪಲಾನುಭವಿಗಳ ಮನೆ ಮಂಜೂರಾತಿ ತಿಳುವಳಿಕೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೨೦೧೩-೧೮ರಲ್ಲಿ ತಾವು ಸಚಿವರಾಗಿದ್ದಾಗ ತಾಲೂಕನ್ನು ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ೨೫ ಸಾವಿರ ಮನೆಗಳ ಹಕ್ಕು ಪತ್ರ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಪೂರ್ಣಗೊಳ್ಳಲಿಲ್ಲ. ಈ ಅವಧಿಯಲ್ಲಿ ಪೂರ್ಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ತಾಲೂಕಿಗೆ ಒಟ್ಟು ೮ ಸಾವಿರ ಮನೆಗಳು ಮಂಜೂರು ಆಗಿವೆ. ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ೭ ಸಾವಿರ ಮನೆ ಮತ್ತು ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ೧ ಸಾವಿರ ಮನೆಗಳು ಮಂಜೂರಾಗಿವೆ. ಜನರಿಗೆ ಅವಶ್ಯಕವಿರುವ ಅನ್ನ, ವಸತಿ, ಶಿಕ್ಷಣ, ಆರೋಗ್ಯ ಮುಂತಾದವುಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಸಂಸದ ಸಾಗರ ಈಶ್ವರ ಖಂಡ್ರೆ ಮಾತನಾಡಿ, ಮಳೆ, ಗಾಳಿ, ಬಿಸಿಲುಗಳಿಂದ ರಕ್ಷಿಸಲು ಒಂದು ಮನೆ ಅವಶ್ಯಕವಾಗಿದೆ. ಕೇವಲ ಭಾಲ್ಕಿ ಮಾತ್ರವಲ್ಲದೆ ಇಡೀ ಜಿಲ್ಲೆಯನ್ನು ಗುಡಿಸಲು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ವಸತಿ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದವರಿಗೆ ೧,೨೦,೦೦೦ ರೂ. ಹಾಗೂ ಪಜಾತಿ, ಪ.ಪಂಗಡ ವರ್ಗದವರಿಗೆ ೧,೭೫,೦೦೦ ರೂ. ಮನೆ ನಿರ್ಮಾಣ ಹಣವನ್ನು ನೀಡಲಾಗುತ್ತಿದೆ. ಈ ಹಣದಲ್ಲಿ ಉತ್ತಮವಾದ ಮನೆ ನಿರ್ಮಾಣ ಕಷ್ಟವಾಗುತ್ತದೆ. ಆದ್ದರಿಂದ ಒಂದು ಮನೆ ೫ ರಿಂದ ೭ ಲಕ್ಷದ ವರೆಗೆ ಹಣ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಕೇಂದ್ರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ರೈಲ್ವೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನದ ಅಧ್ಯಕ್ಷ ಹಣಮಂತರಾವ ಚವ್ಹಾಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕರಾವ ಸೋನಜಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ ಇತರರಿದ್ದರು.

ಪ್ರತಿ ಕುಟುಂಬಕ್ಕೂ ಮನೆ ಎಂಬುದು ಮಾನವೀಯ ಹಕ್ಕು. ಈ ಹಕ್ಕು ಎಲ್ಲ ಅರ್ಹ ಫಲಾನುಭವಿಗಳಿಗೆ ದೊರಕಿಸಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಹೆಚ್ಚಿನ ಮನೆಗಳನ್ನು ಮಂಜೂರಾತಿ ಮಾಡಿಸಿ ಅರ್ಹರಿಗೆ ವಿತರಿಸಲಾಗುತ್ತಿದೆ.

| ಸಾಗರ ಖಂಡ್ರೆ

ಸಂಸದ ಬೀದರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net