

ಭಾಲ್ಕಿ: ಮಕ್ಕಳ ಗುಣಾತ್ಮಕ ಶಿಕ್ಷಣದಲ್ಲಿ ಸಮಾಜದ ಹಿತ ಅಡಗಿದೆ ಎಂದು ಜೆಎಂಎïಸಿ ನ್ಯಾಯಾಲಯದ ನ್ಯಾಯಾಧೀಶ ಆನಂದ ಕೊಣ್ಣೂರ ಹೇಳಿದರು.
ತಾಲೂಕಿನ ತಳವಾಡ(ಕೆ) ಗ್ರಾಮದ ಚನ್ನಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ಕಲಿಸಿ ಕೊಡುವುದು ಸವಾಲಿನ ಕೆಲಸವಾಗಿದೆ. ಅತಿಯಾದ ಮೊಬೈಲ್, ಟಿವಿ ಬಳಕೆಯಿಂದ ಮಕ್ಕಳಲ್ಲಿ ಕಲಿಕೆ ಆಸಕ್ತಿ ಕಡಿಮೆ ಆಗುತ್ತಿದೆ. ಜತೆಗೆ ಮಕ್ಕಳ ಬೌದ್ಧಿಕ ವಿಕಾಸ ಕುಸಿತಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಾಲಕರು ಮಕ್ಕಳ ಕೈಯಗೆ ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ ಓದುವ ಹವ್ಯಾಸ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಫಾಸ್ಟ್ಫುಡ್ಸೇವನೆಯಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇದರಿಂದ ಸಣ್ಣ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದು ಮಕ್ಕಳಲ್ಲಿ ಓದು ಬರಹ ಆಸಕ್ತಿ ಕಡಿಮೆ ಆಗಲು ಕಾರಣವಾಗುತ್ತಿದೆ. ಪಾಲಕರು ಮಕ್ಕಳಿಗೆ ಜಂಕ್ ಫುಡ್ ಆಹಾರ ನೀಡುವುದನ್ನು ನಿಯಂತ್ರಿಸಿ ಉತ್ತಮ ಸಾತ್ವಿಕ, ಪೌಷ್ಟಿಕ ಆಹಾರ ನೀಡಬೇಕು ಎಂದು ತಿಳಿಸಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಶ್ರೀ ಮಹಾಲಿಂಗ ಸ್ವಾಮೀಜಿ ನೇತೃತ್ವ, ಗ್ರಾಪಂ ಅಧ್ಯಕ್ಷೆ ಅನುಪಮ ರವಿ ರಾಚಣ್ಣ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನರಡ್ಡಿ, ಪಿಡಿಒ ನಾಗೇಂದ್ರ ಮೂಲಗೆ, ಶಿವಕುಮಾರ ಫುಲಾರಿ, ಸಹಾದೇವ ಗೌಡಗಾಂವೆ, ಬಾಲಾಜಿ ಭೈರಾಡಗಿ, ಪ್ರಶಾಂತ ಪಾತ್ರೆ, ಶಿವಕುಮಾರ ರಾಜಭವನ, ಪ್ರಾಚಾರ್ಯ ಎನ್.ರಾಜು ಇದ್ದರು
ಗಡಿಭಾಗದ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಅಡಗಿದೆ. ಸಂಸ್ಥೆ ತೆರೆದು ಶಿಕ್ಷಣದ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದೇವೆ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ
ಗ್ರಾಮೀಣ ಭಾಗದಲ್ಲಿ ಪೂಜ್ಯರು ಶಿಕ್ಷಣ ಸಂಸ್ಥೆ ತೆರೆದು ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲ್ಪಿಸಿ ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ.
| ಆನಂದ ಕೊಣ್ಣೂರ ನ್ಯಾಯಾಧೀಶರು, ಭಾಲ್ಕಿ