

StartFragment
ಹುಬ್ಬಳ್ಳಿ: ಇಲ್ಲಿಯ ಸುಳ್ಳ ರಸ್ತೆಯು ಬಸವೇಶ್ವರ ಪಾರ್ಕ್ನಿಂದ ಸನ್ ಸಿಟಿ ಗಾರ್ಡನ್ ವರೆಗೆ ಮಳೆಯಿಂದಾಗಿ ಪೂರ್ತಿ ಅಧ್ವಾನವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆ ತುಂಬೆಲ್ಲ ನೀರು ನಿಂತಿದ್ದು, ಮಳೆ ಕಡಿಮೆಯಾಗಿ ದಿನ ಕಳೆದರೂ ನೀರು ರಸ್ತೆಯಿಂದ ಸರಿದಿಲ್ಲ. ಪರಿಣಾಮ ರಸ್ತೆ ತುಂಬ ನದಿ ಹರಿದಂತಾಗುತ್ತಿದೆ.
ಅಲ್ಲಲ್ಲಿ ರಸ್ತೆ ಹೊಂಡಗಳಿದ್ದು, ನಿಂತ ನೀರಲ್ಲಿ ತಗ್ಗುಗಳು ಕಾಣದೇ ವಾಹನ ಸವಾರರು ಎದ್ದು ಬಿದ್ದು ಸಾಗಬೇಕಿದೆ. ಬೈಕ್ ಸವಾರರು ಎಷ್ಟೋ ಜನರು ಬಿದ್ದು ಪೆಟ್ಟು ತಿಂದಿದ್ದಾರೆ. ಮಹಿಳೆಯರು ಈ ದಾರಿಯಲ್ಲಿ ಬರಲು ಹೆದರುವಂತಾಗಿದೆ. ಸುಮಾರು ಒಂದು ಕಿ.ಮೀ. ವರೆಗೆ ಸುಳ್ಳ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ.
ರಸ್ತೆ ಬದಿಯಲ್ಲಿ ಕಟ್ಟಡಗಳ ತ್ಯಾಜ್ಯ ತಂದು ಎಸೆದಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಹೊಂಡಮಯ ರಸ್ತೆ ಅಕ್ಕಪಕ್ಕ ಮೂರ್ನಾಲ್ಕು ಲೇಔಟ್ಗಳು ಇವೆ. ಈ ಎಲ್ಲ ಬಡಾವಣೆಗಳ ಜನರು ಸಂಚಾರಕ್ಕೆ ಬೇರೆ ದಾರಿ ಇಲ್ಲದೇ ನಿತ್ಯವೂ ಯಾತನೆ ಅನುಭವಿಸಬೇಕಿದೆ.
ಈ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿದರೆ ಜೆಸಿಬಿ ಖಾಲಿ ಇಲ್ಲ. ಒಂದೆರಡು ದಿನ ಬಿಟ್ಟು ಕಳಿಸುತ್ತೇವೆ ಎನ್ನುತ್ತಿದ್ದಾರೆ. ಅಲ್ಲಿಯವರೆಗೂ ಎಷ್ಟು ಜನ ಬಿದ್ದು ನೋವು ಅನುಭವಿಸಬೇಕು ಎಂದು ಸನ್ ಸಿಟಿ ಗಾರ್ಡನ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾದ ಬಸವರಾಜ ಗುರಣ್ಣವರ, ಹನಮಂತ ಕೊಪ್ಪದ, ಬಸವರಾಜ ಮೇಟಿ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಷ್ಟು ಶೀಘ್ರ ರಸ್ತೆ ಬದಿಯಲ್ಲಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.