ಭಾರಿ ಮಳೆ-ಜಲಾವೃತವಾದ ಬೆಳೆ

28MDG1A BELEGE NIRU
Published on

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಸುರಿದ ರಭಸದ ಮಳೆಯಿಂದಾಗಿ ಒಂದೆಡೆ ಜನಜೀವನ ಅಸ್ತವ್ಯಸ್ತವಾದರೆ ಮತ್ತೊಂದೆಡೆ ಅಪಾರ ಪ್ರಮಾಣದ ಬೆಳೆ ಜಲಾವೃತಗೊಂಡಿದೆ.

ಮುಂಡರಗಿ, ಡಂಬಳ, ಡೋಣಿ, ಡೋಣಿ ತಾಂಡಾ, ಅತ್ತಿಕಟ್ಟಿ, ದಿಂಡೂರ ಮೊದಲಾದ ಕಡೆಗಳಲ್ಲಿ ಸೂರ್ಯಕಾಂತಿ, ಗೋವಿನಜೋಳ, ಶೇಂಗಾ, ಉಳ್ಳಾಗಡ್ಡಿ ಮತ್ತಿತರ ಬೆಳೆಗಳು ಜಲಾವೃತಗೊಂಡಿವೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ಒಂದೆಡೆ ಕೀಟ ಹಾಗೂ ರೋಗ ಬಾಧೆಗೆ ತುತ್ತಾಗುತ್ತಿದ್ದರೆ ಈಗ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಬೆಳೆಹಾನಿ ಸಂಭವಿಸುವ ಆತಂಕ ಎದುರಾಗಿದೆ.

ಡೋಣಿ, ಡೋಣಿತಾಂಡಾ ಭಾಗದ ಮಾಸ್ತಮ್ಮನ ಹಳ್ಳ, ಕವಲಿ ಹಳ್ಳ, ವಡಿಕೇರಿಹಳ್ಳ, ಮಸಗನವ್ವನ ಹಳ್ಳ, ದೊಡ್ಡಹಳ್ಳಗಳು ಮೈದುಂಬಿ ಹರಿದ ಪರಿಣಾಮ ಹಳ್ಳಗಳ ಸುತ್ತ ಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿದ್ದು, ಕೊಳೆಯುವ ಭೀತಿ ಸೃಷ್ಟಿಸಿದೆ.

ಡಂಬಳ ಗ್ರಾಮದ ವಿಕ್ಟೋರಿಯಾ ಕೆರೆ (ಗೋಣಿಸಮುದ್ರ ಕೆರೆ) ಕೋಡಿ ಬಿದ್ದು ದೊಡ್ಡಬಸವೇಶ್ವರ ಹಳ್ಳ ರಭಸದಿಂದ ಹರಿದ ಪರಿಣಾಮ ಗದಗ-ಮುಂಡರಗಿ ರಸ್ತೆ (ಡಂಬಳ ಒಳಭಾಗದ ರಸ್ತೆ)ಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಹೀಗಾಗಿ ಜನರು ಮತ್ತು ವಾಹನಗಳು ಬೇರೆ ಮಾರ್ಗದಿಂದ ಸುತ್ತುವರಿದು ಸಂಚರಿಸುವಂತಾಯಿತು.

ಭಾರಿ ಮಳೆಗೆ ಡೋಣಿ, ಡೋಣಿತಾಂಡಾ, ಅತ್ತಿಕಟ್ಟಿ, ದಿಂಡೂರ ಸುತ್ತಲಿನ ಹಲವು ಹಳ್ಳಗಳು ತುಂಬಿ ಹರಿದಿದ್ದು ಹಳ್ಳದ ಪಕ್ಕದ ನೂರಾರು ಹೆಕ್ಟೇರ್ ಜಮೀನುಗಳಿಗೆ ನೀರುನುಗ್ಗಿ ಬೆಳೆಗಳೆಲ್ಲ ಸಂಪೂರ್ಣ ಜಲಾವೃಗೊಂಡಿವೆ. ಪ್ರತಿವರ್ಷ ದೊಡ್ಡ ಮಳೆಗೆ ಬೆಳೆಹಾನಿ ಎದುರಿಸುವಂತಾಗಿದೆ. ಹಳ್ಳದ ನೀರು ರೈತರ ಜಮೀನುಗಳಿಗೆ ನುಗ್ಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. | ಶಂಕರಗೌಡ ಜಯಣ್ಣಗೌಡ್ರ, ಡೋಣಿ ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net