

ಅರಕಲಗೂಡು: ಭಾರಿ ಮಳೆ ಅಬ್ಬರಕ್ಕೆ ತಾಲೂಕಿನ ರಾಮನಾಥಪುರ- ಕೊಣನೂರು ಮಾರ್ಗದ ಸಂಚಾರ ಬಂದ್ ಆದ ಹಿನ್ನಲೆಯಲ್ಲಿ ಭಾನುವಾರ ಹಿರೇಹಳ್ಳಿ ಹಳ್ಳದ ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ಪ್ರಾಣ ಲೆಕ್ಕಿಸದೆ ಸಾವಿರಾರು ಪ್ರಯಾಣಿಕರು ಓಡಾಡುತ್ತಿದ್ದಾರೆ.
ಶನಿವಾರ ರಾತ್ರಿ ಸುರಿದ ಮಳೆ ಗಂಡಾಂತರಕ್ಕೆ ಮಾಗಡಿ- ಸೋಮವಾರಪೇಟೆ ಮಾರ್ಗದ ವಡ್ವಾನಹೊಸಹಳ್ಳಿ ಬಳಿ ನಿರ್ಮಾಣ ಹಂತದ ಸೇತುವೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ.
ಪರಿಣಾಮವಾಗಿ ರಾಮನಾಥಪುರ- ಕೊಣನೂರು ಮಾರ್ಗವಾಗಿ ರಸ್ತೆ ಸಂಚಾರ ಸ್ಥಗಿತವಾಗಿದೆ. ಹೀಗಾಹಿ ಕೊಣನೂರು- ಮೈಸೂರು, ಹಾಸನ- ಮಡಿಕೇರಿ ಮಾರ್ಗವಾಗಿ ಸಂಚರಿಚರಿಸುವ ಸಾವಿರಾರು ವಾಹನಗಳು, ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ನೂರಾರು ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಹಿರೇಹಳ್ಳಿ ಹಳ್ಳದ ಸೇತುವೆ ಮೇಲೆ ರಭಸವಾಗಿ ಭೋರ್ಗರೆದು ನುಗ್ಗುತ್ತಿರುವ ನೀರಿನಲ್ಲೇ ಜೀವ ಲೆಕ್ಕಿಸದೆ ಸಂಚರಿಸುತ್ತಿದ್ದಾರೆ.
ಹಿರೇಹಳ್ಳಿ ಮಾರ್ಗದ ಹಳ್ಳದಲ್ಲಿ ರಸ್ತೆ ತೀರ ಕಿರಿದಾಗಿದ್ದು ಸೇತುವೆ ಹಳ್ಳದಲ್ಲಿ ಸೊಂಟದ ಮಟ್ಟಕ್ಕೆ ಮಳೆ ನೀರು ಹರಿಯುತ್ತಿದೆ. ಕೆಲವು ಬಸ್ ಗಳು ನಡುಭಾಗದ ಸೇತುವೆ ಪ್ರವಾಹದಲ್ಲಿ ಸಿಲುಕಿ ಎದುರು ಬದುರಾದ ವಾಹನಗಳು ಓಡಾಡಲು ಸಾಧ್ಯವಾಗದೆ ಪ್ರಯಾಣಿಕರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ.
ಕಳೆದ 35 ವರ್ಷಗಳಿಂದ ಹಾಲಿ ಮತ್ತು ಮಾಜಿ ಶಾಸಕರು ತಾಲೂಕಿನಲ್ಲಿ ಹಾದು ಹೋಗಿರುವ ಕೊಣನೂರು- ಮೈಸೂರು ಮಾರ್ಗದ ರಸ್ತೆ ಅಭಿವೃದ್ಧಿ ಪಡಿಸದ ಪರಿಣಾಮ ಪ್ರಯಾಣಿಕರು ಜೀವದ ಹಂಗು ತೊರೆದು ಓಡಾಡುವ ದುಸ್ಥಿತಿ ಬಂದೊದಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.