ಬೇಲೂರು: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಆನುಘಟ್ಟ ಗ್ರಾಮದ ಕಾಫಿ ಬೆಳೆಗಾರ ಪಿ.ವಿಶ್ವನಾಥ್ ಎಂಬುವವರು ಸೆಸ್ಕ್ ವಿರುದ್ಧ ಹೋರಾಡಿದ್ದಕ್ಕೆ ಕೊನೆಗೂ ಗ್ರಾಹಕರ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದಂತ್ತಾಗಿದೆ. ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಆನುಘಟ್ಟ ಗ್ರಾಮದ ಕಾಫಿ ಬೆಳೆಗಾರ ಪಿ.ವಿಶ್ವನಾಥ್, ತಮ್ಮ ಕಾಫಿ ಪಲ್ಪರ್ ಯಂತ್ರ ಬಳಸಿದಕ್ಕಾಗಿ 2020ನೇ ಸಾಲಿನ ನವೆಂಬರ್ ತಿಂಗಳಲ್ಲಿ ಸೆಸ್ಕ್‌ನಿಂದ ಬರೋಬ್ಬರಿ 1,75,858 ರೂ.ಮೊತ್ತದ ವಿದ್ಯುತ್ ಬಿಲ್ ಪಡೆದು ಆಘಾತಗೊಳಗಾಗಿದ್ದರು. ವಿಸೇಷವೆಂದರೆ ಮನೆಯ ಹತ್ತಿರ ನಿರ್ಮಿಸಿದ್ದ ಕಾಫಿ ಪಲ್ಪರ್ ಯಂತ್ರಕ್ಕಾಗಿ ಪಡೆದಿದ್ದ 3 ಪೇಸ್ ವಿದ್ಯುತ್ ಸಂಪರ್ಕಕ್ಕೆ ಪ್ರತಿ ತಿಂಗಳು ಅಂದಾಜು 1500 ರೂ. ಮೊತ್ತದ ವಿದ್ಯುತ್ ಬಿಲ್ ಪಡೆಯುತ್ತಿದ್ದವರಿಗೆ 2020ರ ನವೆಂಬರ್ ತಿಂಗಳಲ್ಲಿ ಏಕಾಏಕಿ ವಿದ್ಯುತ್ ಬಿಲ್ ಅನ್ನು ಮೀಟರ್ ರೀಡರ್ ಬರೋಬ್ಬರಿ 1,75,858 ಆಗಿದ್ದು ಅದನ್ನು ಪಾವತಿಸುವಂತೆ ಸೆಸ್ಕ್ ಆದೇಶಿಸಿತ್ತು. ಇದರಿಂದ ಆಘಾತಗೊಂಡ ಪಿ.ವಿಶ್ವನಾಥ್ ಅವರು, ಬಿಲ್ ಮತ್ತು ಎನರ್ಜಿ ಮೀಟರ್‌ರನ್ನು ಪುನಃ ಮರು ಪರಿಶೀಲಿಸುವಂತೆ ಮನವಿ ಮಾಡಿದ್ದರು. ಆದರೆ ಪರಿಶೀಲಿಸಿದ ನಂತರ ಎಲ್ಲವೂ ಸರಿಯಾಗಿಯೇ ಇದೆ ನೀವು ಬಿಲ್‌ನ ಮೊತ್ತ ಕಟ್ಟಲೆಬೇಕು ಎಂದು ಸೆಸ್ಕ್ ಸಿಬ್ಬಂದಿ ತಿಳಿಸಿ ಹೋದರು. ನಂತರ ಗ್ರಾಹಕರು ತಾಲೂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ, ಅಲ್ಲಿಯೂ ಸಹ ಎಲ್ಲವೂ ಸರಿಯಾಗಿಯೇ ಇದೆ ನೀವು ಒಮ್ಮೆಲೆ ಅಥವಾ ಕಂತಿನ ಪ್ರಕಾರ ಕಟ್ಟಿ ಎಂದು ಹೇಳಿದರು. ನಂತರ ವಿಧಿಯಿಲ್ಲದೇ ಪಿ.ವಿಶ್ವನಾಥ್ ಅವರು, ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಯಾರೇ ವಕೀಲರನ್ನು ನೇಮಕ ಮಾಡಿ ಕೊಳ್ಳಡದೆ ಸ್ವತಃ ತಾವೇ ನ್ಯಾಯಾಲಯದಲ್ಲಿ ವಾದಿಸಿ ಸಂಬಂಧಿಸಿದ ಅಗತ್ಯದಾಖಲೆಗಳನ್ನು ಒದಗಿಸಿ ಸತತ 30 ತಿಂಗಳ ಕಾಲ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಹೋರಾಟದಲ್ಲಿ ತಮ್ಮ ಪರ ತೀರ್ಪು ಬರುವಂತೆ ವಾದ ಮಂಡಿಸಿ ವಿಜಯ ಸಾಧಿಸಿದ್ದು, ವಿದ್ಯುತ್ ಬಿಲ್‌ನ ಸಂಪೂರ್ಣ ಮೊತ್ತ 1,75,858 ರೂ.ಗಳನ್ನು ಮನ್ನ ಮಾಡಿಸಿದ್ದಲ್ಲದೆ, ಸೆಸ್ಕ್‌ನ ಸೇವಾ ಲೋಪಕ್ಕಾಗಿ 10 ಸಾವಿರ ರೂ. ಮತ್ತು ದಾವೆ ಹೂಡಿದ ವೆಚ್ಚ ಹಾಗೂ ಆನುಭವಿಸಿದ ಮಾನಸಿಕ ವೇದನೆಗಾಗಿ 10 ಸಾವಿರ ಒಟ್ಟಾರೆ 20 ಸಾವಿರ ರೂ.ಗಳನ್ನು ಗ್ರಾಹಕರಿಗೆ ಮುಂದಿನ 45 ದಿನದೊಳಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದು, ಗ್ರಾಹಕರಿಗೆ ನ್ಯಾಯ ದೊರಕಿದಂತ್ತಾಗಿದೆ.