

ಶನಿವಾರಸಂತೆ: ಕಳೆದ ಮೂರ‌್ನಾಲ್ಕು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ದೊಡ್ಡಳ್ಳಿ ಗ್ರಾಮದ ದೊಡ್ಡಳ್ಳಿ ಕೆರೆ ಭರ್ತಿಯಾಗಿ ಕೆರೆಯ ಕೋಡಿ ಹರಿಯುವ ನಾಲೆ ಒಡೆದು ಹೋಗಿದ್ದು ನೀರು ಗ್ರಾಮದ ರಸ್ತೆಯಲ್ಲಿ ಹರಿದಿದೆ. ನೀರಿನ ರಭಸಕ್ಕೆ ಡಾಂಬರ್ ರಸ್ತೆ ಕೊಚ್ಚಿ ಹೋಗಿದೆ. ದೊಡ್ಡಳ್ಳಿ ಕೆರೆಗೆ ಪಕ್ಕದ ಬಾಲಕೆರೆಯ ನೀರು ಸೇರುತ್ತಿರುವುದರಿಂದ ಈ ಕೆರೆಯಲ್ಲಿ ನೀರು ಅಧಿಕವಾಗಿ ಸಂಗ್ರಹವಾಗುತ್ತದೆ. ಕೆರೆ ಕೋಡಿಯಿಂದ ಹೆಚ್ಚುವರಿ ನೀರು ಹರಿಯಲು ನಾಲೆಯನ್ನು ನಿರ್ಮಿಸಲಾಗಿದ್ದು 40 ವರ್ಷಗಳಿಂದ ಹೂಳು ತುಂಬಿದೆ. ಪರಿಣಾಮ ನಾಲೆಯ ನೀರು ಗದ್ದೆ ಮೇಲೆ ಹರಿಯುತ್ತಿದೆ.
ಹೊಸಗುತ್ತಿ ಗ್ರಾಮದಲ್ಲಿ 11 ಕೆ.ವಿ. ಮಾರ್ಗದ 8 ವಿದ್ಯುತ್ ಕಂಬಗಳು ಸೇರಿದಂತೆ 100 ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಗಳು ಮುರಿದು ಬಿದ್ದಿವೆ. ಹೊಸಗುತ್ತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ಅಪಾರ ನಷ್ಟವಾಗಿದೆ ಎಂದು ಸೆಸ್ಕ್ ಕಿರಿಯ ಇಂಜಿನಿಯರ್ ರಮೇಶ್ ಹೇಳಿದರು.