

ಹಾಸನ: ಪ್ರತಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳಲ್ಲಿ ಶಿಸ್ತುಬದ್ಧ ಜೀವನಕ್ಕಾಗಿ ಭಾರತ್ ಸೇವಾದಳ ಸಂಘದ ಸ್ಥಾಪನೆ ಅತ್ಯಗತ್ಯ. ಮಕ್ಕಳಲ್ಲಿ ಭಾರತ್ ಸೇವಾ ದಳದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಶಿಕ್ಷಕರು ಹಾಗೂ ಉಪನ್ಯಾಸಕರು ಮಾಡಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹಾಲಿಂಗಯ್ಯ ಕರೆ ನೀಡಿದರು.
ಭಾರತ್ ಸೇವಾದಳ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಎವಿಕೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತ್ ಸೇವಾದಳದ ಮಾಹಿತಿ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ್ ಸೇವಾ ದಳಕ್ಕೆ ವಿಶೇಷ ಅನುದಾನ ಲಭ್ಯವಿದ್ದು, ಅವುಗಳನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳುವ ಜತೆಗೆ, ಮಕ್ಕಳಲ್ಲಿ ಸೇವಾದಳದ ಕಾರ್ಯ ವೈಖರಿಯನ್ನು ಮನದಟ್ಟು ಮಾಡುವ ಕೆಲಸ ಮಾಡಬೇಕು ಎಂದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್, ಸೇವಾದಳ, ಕ್ರೀಡೆ ಹೀಗೆ ವಿವಿಧ ಚಟುವಟಿಕೆಗಳನ್ನು ನಡೆಸಲು ಶಾಲಾ- ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯ ಇದೆ. ಆದರೆ, ಅನೇಕ ಶಾಲಾ- ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಆದರೂ ತಾಲೂಕು, ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಕ್ರೀಡಾಕೂಟ ನಡೆಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಹದಿಹರೆಯದ ಮಕ್ಕಳ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಅವರಿಗೆ ವಿವಿಧ ವಿಚಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತ್ ಸೇವಾದಳದ ಮುಂಚೂಣಿಯಲ್ಲಿ ಇದ್ದು, ಧ್ವಜ ಸಂಹಿತೆ ಬಗ್ಗೆ ಅಪಾರ ಅನುಭವ ಹೊಂದಿರುವ ಭಾರತ್ ಸೇವಾದಳದ ಕಾರ್ಯ ವೈಖರಿ ಬಗ್ಗೆ ಎಲ್ಲರಿಗೂ ಅರಿವು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕಮಲ್ ಕುಮಾರ್, ಪ್ರಾಂಶುಪಾಲರಾದ ಜಯಲಕ್ಷ್ಮೀ, ಚನ್ನಯ್ಯ, ಶೈಲಜಾ ಕುಮಾರಿ, ಗೋಪಾಲ್, ಸಂಘದ ವಲಯ ಸಂಘಟಕಿ ರಾಣಿ ಸೇರಿದಂತೆ ಜಿಲ್ಲೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಭಾಗವಹಿಸಿದ್ದರು.