

ಯಳಂದೂರು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಸೆ.30ರಂದು ಕರ್ನಾಟಕಕ್ಕೆ ಆಗಮಿಸಲಿದೆ. ಪಕ್ಷದ ಕಾರ್ಯಕರ್ತರು, ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳ ಸಹಕಾರ ಅತ್ಯಗತ್ಯ ಎಂದು ಮಾಜಿ ಶಾಸಕ ಎಸ್.ಬಾಲರಾಜು ಮನವಿ ಮಾಡಿದರು.
ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ದೇಶದ ರಾಜಕೀಯ ಇತಿಹಾಸದಲ್ಲಿ ಭಾರತ ಸ್ವಾತಂತ್ರೃಕ್ಕೆ ಅನೇಕ ತ್ಯಾಗ ಬಲಿದಾನ ನೀಡಿದ ಪಕ್ಷ. ನೆಹರು 9 ವರ್ಷ ಜೈಲಿನಲ್ಲಿದ್ದು ಸ್ವಾತಂತ್ರೃ ಸಂಗ್ರಾಮದಲ್ಲಿ ಭಾಗವಹಿಸಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಆಧುನಿಕ ಭಾರತದ ಕನಸಿಗೆ ರೆಕ್ಕೆ ಕಟ್ಟಿದ್ದರು ಎಂದು ತಿಳಿಸಿದರು.
ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದರು. ನಂತರ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶವಿದ್ದರೂ ಇದನ್ನು ತಿರಸ್ಕರಿಸಿ ಮನಮೋಹನ್‌ಸಿಂಗ್‌ರನ್ನು ಪ್ರಧಾನಿ ಮಾಡುವ ಮೂಲಕ ದೇಶವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿದರು. ಅಧಿಕಾರದ ಲಾಲಸೆ ಇಲ್ಲದೆ ಕಾಂಗ್ರೆಸ್ ಪಕ್ಷ ಬಡವರು, ಕಾರ್ಮಿಕರು, ಶ್ರಮಿಕ ವರ್ಗದ ಪರವಾಗಿ ಹತ್ತಾರು ಯೋಜನೆಗಳನ್ನು ನೀಡಿದೆ ಎಂದರು.
ಕಳೆದ 8 ವರ್ಷದಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಹೊಸ ಕಾನೂನುಗಳನ್ನು ಜನರ ಮೇಲೆ ಏರುತ್ತಿದೆಯೇ ವಿನಃ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಪ್ರತಿಯೊಂದು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಸಾರ್ವಜನಿಕರ ಬದುಕು ನಡೆಸಲು ದುಸ್ತರವಾಗುತ್ತಿದೆ. ಇದನ್ನು ಮನವರಿಕೆ ಮಾಡಿಕೊಡಲು ಕಾಂಗ್ರೆಸ್ ಪಕ್ಷದ ರಾಹುಲ್‌ಗಾಂಧಿ ಭಾರತ್ ಜೋಡೋ ಎಂಬ ಐತಿಹಾಸಿಕ ಪಾದಯಾತ್ರೆ ಹಮ್ಮಿಕೊಂಡಿದೆ. ಸೆ.30ರಂದು ಇದು ಗುಂಡ್ಲುಪೇಟೆಗೆ ಆಗಮಿಸಲಿದೆ. ಇಲ್ಲಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಮಂದಿ ಭಾಗವಹಿಸಲು ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಗುಂಡ್ಲುಪೇಟೆಯಿಂದ ಬೇಗೂರಿನ ತನಕ ಪ್ರತಿಯೊಬ್ಬರೂ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಎಸ್.ಜಯಣ್ಣ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿಯಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದೆ. ಅಂದು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದ್ದು ಇಂತಹ ಒಂದು ಪಾದಯಾತ್ರೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಹಾಜರಾಗಿ ಇದನ್ನು ಯಶಸ್ವಿಗೊಳಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ಕೃಷ್ಣಾಪುರ ಎಂ.ದೇವರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಕೇತಮ್ಮ, ಕಿನಕಹಳ್ಳಿ ಪ್ರಭುಪ್ರಸಾದ್, ಕಂದಹಳ್ಳಿ ನಂಜುಂಡಸ್ವಾಮಿ, ವೆಂಕಟೇಶ್ ಸೇರಿದಂತೆ ಅನೇಕರು ಹಾಜರಿದ್ದರು.