ಭಾರತ್ ಜೋಡೋ ಯಾತ್ರೆಯಲ್ಲ, ಕಾಂಗ್ರೆಸ್ ಜೋಡೋ ಯಾತ್ರೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಭಾರತ್ ಜೋಡೋ ಯಾತ್ರೆಯಲ್ಲ, ಕಾಂಗ್ರೆಸ್ ಜೋಡೋ ಯಾತ್ರೆ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
Published on

ಹಾಸನ: ಮುಸ್ಲಿಂ ಸಮುದಾಯದ ಮತ ಸೆಳೆಯುವುದಕ್ಕಾಗಿ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಟೀಕಿಸಿದರು.


ಮಂಗಳವಾರ ಹಾಸನಾಂಬೆ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದೇಶದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಅಧಿಕಾರಕ್ಕಾಗಿ ದೇಶದ್ರೋಹಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.


ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಾವ ಸಂದರ್ಭದಲ್ಲಿ ನಡೆಯುತ್ತಿದೆ ಎಂಬುದನ್ನು ಗಮನಿಸಬೇಕು. ಅದು ಭಾರತ್ ಜೋಡೋ ಯಾತ್ರೆ ಅಲ್ಲ, ಕಾಂಗ್ರೆಸ್ ಜೋಡೋ ಯಾತ್ರೆ. ಕಾಂಗ್ರೆಸ್‌ನ ಹಿರಿಯ ನಾಯಕರು ಪಕ್ಷ ತೊರೆಯಲು ಆರಂಭಿಸಿದ್ದಾರೆ. ಒಂದೇ ಕುಟುಂಬದ ನೇತೃತ್ವದ ವಿರುದ್ಧ ಅಸಮಾಧಾನ ಎದ್ದಿದೆ. ಹಾಗಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹೆಸರಿಗೆ ಮಾತ್ರ ಬೇರೆಯವರನ್ನು ಆಯ್ಕೆ ಮಾಡುವ ನಾಟಕ ನಡೆಯುತ್ತಿದೆ. ಜೊತೆ ಹಿರಿಯ ನಾಯಕರು ಕಾಂಗ್ರೆಸ್ ತೊರೆಯದಂತೆ ತಡೆಯಲು ಭಾರತ್ ಜೋಡೋ ಯಾತ್ರೆಯ ನಾಟಕವೂ ಮುಂದುವರೆಯುತ್ತಿದೆ ಎಂದು ವ್ಯಂಗ್ಯವಾಡಿದರು.

ರಾಹುಲ್ ಗಾಂಧಿಯವರಿಗೆ ಭಾರತ ಎಂದರೇ ಏನು ಎಂಬುದೇ ಗೊತ್ತಿಲ್ಲ. ಈ ದೇಶದ ಸಂಸ್ಕೃತಿ ಏನೆಂದು ತಿಳಿದಿಲ್ಲ. ಈ ಮಣ್ಣಿನ ಗುಣ ಎಂತಹದು ಎಂಬ ಅರಿವಿಲ್ಲ. ಇಂತಹವರು ಭಾರತ ಜೋಡೋ ಯಾತ್ರೆ ನಡೆಸುತ್ತಿರುವುದು ಕಾಂಗ್ರೆಸ್‌ನ ದುಸ್ಥಿತಿಯನ್ನು ತೋರುತ್ತದೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ೋಷಣೆಯಾಗಿದೆ. ಗುಜರಾತ್‌ನಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆ ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದರೆ ಒಂದು ರಾಷ್ಟ್ರೀಯ ಪಕ್ಷದ ರಾಜಕೀಯ ನಾಯಕ ಎಂಬುದಾಗಿ ರಾಹುಲ್ ಗಾಂಧಿ ಅವರನ್ನು ಒಪ್ಪಿಕೊಳ್ಳಬಹುದಿತ್ತು ಎಂದರು.


ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು ಅನಗತ್ಯವಾಗಿ ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮುಸ್ಲಿಮರ ಮತ ಸೆಳೆಯುವ ದುರುದ್ದೇಶದಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರೂ ಆರ್‌ಎಸ್‌ಎಸ್ ಟೀಕಿಸಲು ಅವನಶ್ಯಕ ಬಳಸುತ್ತಿದ್ದಾರೆ. ಇದನ್ನೆಲ್ಲ ಜನ ಗಮನಿಸುತ್ತಿದ್ದಾರೆ. ಕೇವಲ ಮುಸ್ಲಿಂ ಸಮುದಾಯದ ಮತ ಗಳಿಸಿ ಅಧಿಕಾರಕ್ಕೆ ಬರುವ ಕನಸನ್ನು ಅವರು ಕಾಣುತ್ತಿದ್ದಾರೆ ಎಂದು ತಿರುಗೇಟು ನೀಡಿದರು.


ಅಲ್ಪಸಂಖ್ಯಾತರ ತುಷ್ಠೀಕರಣದಿಂದಾಗಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಆದರೂ ಮತ್ತೆ ಅದೇ ತಪ್ಪು ಮಾಡಲು ಹೊರಟಿದ್ದಾರೆ. ದೇಶದ ಜನ ಬಿಜೆಪಿ ಮತ್ತು ಅಭಿವೃದ್ಧಿಯ ಪರ ಇದ್ದಾರೆ. ಜನರಿಗೆ ದೇಶದ ಭದ್ರತೆ ಮತ್ತು ನೆಮ್ಮದಿ ಬೇಕಿದೆ. ಅದನ್ನು ಬಿಜೆಪಿ ಸರ್ಕಾರ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದರು.

ಎಲ್ಲಿಂದಲೋ ಬಸ್ಸಿನಲ್ಲಿ ಜನರನ್ನು ಕರೆದುಕೊಂಡು ಬಂದು ಪಾದಯಾತ್ರೆಗೆ ಸೇರಿಸುವುದು ದೊಡ್ಡ ಸಾಧನೆ ಅಲ್ಲ. ಇಂತಹ ನಾಟಕದ ಪಾದಯಾತ್ರೆಯಿಂದ ಕಾಂಗ್ರೆಸ್ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಕನಸನ್ನು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಕಾಣುತ್ತಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಗಿಂತ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ‘ಜೋಡೋ’ ಮಾಡುವುದೇ ದುಸ್ತರವಾಗಿ ಕಂಡಿರಬೇಕು. ಇಬ್ಬರ ಕೈಗಳನ್ನೂ ಎಳೆದೆಲೆದು ಜೋಡಿಸುತ್ತಿದ್ದ ದೃಶ್ಯ ಕಾಂಗ್ರೆಸ್ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಕಟಕಿಯಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಸನ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net