ಭಾರತ್ ಜೋಡೋ ಯಾತ್ರೆ  ಯಶಸ್ಸಿಗೆ ಜಿಲ್ಲಾ ಸಮಿತಿ ರಚನೆ

IMG-20220919-WA0030.jpg
Published on

ದಾವಣಗೆರೆ: ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಎಚ್.ಆಂಜನೇಯ ನೇತೃತ್ವದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಸಮಿತಿ ರಚಿಸಲಾಗಿದೆ.

ಶಾಸಕರಾದ ಎಸ್.ರಾಮಪ್ಪ, ಟಿ. ರಘುಮೂರ್ತಿ, ಎಂಎಲ್ಸಿ ಮೋಹನ್ ಕೊಂಡಜ್ಜಿ, ಮಾಜಿ ಸಚಿವ ಡಿ. ಸುಧಾಕರ್, ಬಿ.ಎನ್. ಚಂದ್ರಪ್ಪ, ಕೆ. ಶಿವಮೂರ್ತಿ, ಮಾಜಿ ಎಂಎಲ್ಸಿ ಜಲಜಾನಾಯ್ಕ, ರಘು ಆಚಾರ್ ಒಳಗೊಂಡಂತೆ ಒಟ್ಟು 38 ಜನರ ಸಮಿತಿ ರಚಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಾತ್ರೆಯ ಯಶಸ್ಸಿಗಾಗಿ ಪ್ರತಿ ಕ್ಷೇತ್ರದಿಂದ ತಲಾ 5 ಸಾವಿರ ಜನರನ್ನು ಕರೆತರುವಂತೆ ಸೂಚನೆ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಶದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಜೀವನ ಸಂಕಷ್ಟದಲ್ಲಿದೆ. ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸಲಾಗುತ್ತಿದೆ. ಇದೆಲ್ಲದರ ಜನಜಾಗೃತಿಗಾಗಿ ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ದೇಶಾದ್ಯಂತ 3500 ಕಿ.ಮೀ ದೂರ ಕ್ರಮಿಸುವ ಈ ಯಾತ್ರೆಯು ಕರ್ನಾಟಕದಲ್ಲಿ 21 ದಿನಗಳ ಕಾಲ 510 ಕಿ.ಮೀ. ಸಂಚರಿಸಲಿದೆ. ದಿನವೊಂದಕ್ಕೆ 25ಕ್ಕೂ ಹೆಚ್ಚು ಕಿ.ಮೀ. ದೂರದ ಪಾದಯಾತ್ರೆ ನಡೆಯಲಿದೆ. ಜನರೊಂದಿಗೆ ಸಂವಹನವೂ ಇರಲಿದೆ ಎಂದು ಹೇಳಿದರು. ಅಕ್ಟೋಬರ್ 12ರಂದು ಸಂಜೆ ತುಮಕೂರು ಜಿಲ್ಲೆ ತಾವರೆಕೆರೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಲುಪಲಿದೆ. ಮರುದಿನ ಅಲ್ಲಿನ ಬೈಪಾಸ್ ಮೂಲಕ ಯಾತ್ರೆ ಶುರುವಾಗಲಿದೆ. ಬಾಲೇನಹಳ್ಳಿ, ಸಾಣೇಕೆರೆ, ಸಿದ್ದಾಪುರ, ಚಳ್ಳಕೆರೆ, ಗಿರಿಯಮ್ಮನಹಳ್ಳಿ, ಹಿರೇಹಳ್ಳಿ, ಕೋನಸಾಗರ, ಮೊಳಕಾಲ್ಮೂರು, ರಾಂಪುರ ಮೂಲಕ ಅ.17ರಂದು ಆಂಧ್ರಪ್ರದೇಶಕ್ಕೆ ತೆರಳಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಯಾತ್ರೆ ಸಂಚರಿಸುವುದಿಲ್ಲ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಎಸ್ಸಿ ವಿಭಾಗದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಚಂದ್ರು ಡೋಲಿ, ಕೆ.ಎಂ.ಮಂಜುನಾಥ್, ಸುಭಾನ್‌ಖಾನ್, ಎಂ.ಎಸ್.ವೀರಭದ್ರಪ್ಪ, ಡಿ. ಶಿವಕುಮಾರ್, ಕೆ.ಪಿ.ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net