ಭಾರತ್ ಜೋಡೋ ಪಾದಯಾತ್ರೆಗೆ ಹಾಸನದಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು

07_HSN_01
Published on

ಹಾಸನ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಚರಿಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಸೇರಿಕೊಳ್ಳಲು ಶುಕ್ರವಾರ ಹಾಸನದಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ನೂರಾರು ವಾಹನಗಳಲ್ಲಿ ಪ್ರಯಾಣ ಬೆಳೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಗೆ ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಸೇರಲಾರಂಭಿಸಿದರು. ಕಾರ್ಯಕರ್ತರಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್‌ನ ವಿವಿಧ ಮುಖಂಡರು ಮಾಡಿದ್ದರು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಹಾಸನ ಜಿಲ್ಲಾ ಉಸ್ತುವಾರಿ ಆಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ್ ಅವರು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೂ ಯಾವ ರಾಜಕೀಯ ಪಕ್ಷವೂ ನಡೆಸದ ಪಾದಯಾತ್ರೆಯನ್ನು ದೇಶಧ ಭರವಸೆಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿದೆ ಎಂದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 151 ದಿನಗಳ ಕಾಲ ನಡೆಯುವ 3,500 ಕಿ.ಮೀ. ದೂರದ ಪಾದಯಾತ್ರೆಯು ಈಗ ಕರ್ನಾಟಕದಲ್ಲಿ ಸಂಚರಿಸುತ್ತಿದೆ. ರಾಜ್ಯದಲ್ಲಿ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜಾತಿ, ಮತ, ಧರ್ಮ, ಭಾಷೆಗಳ ಹೆಸರಲ್ಲಿ ಜನರನ್ನು ವಿಭಜಿಸುತ್ತಿರುವುದನ್ನು ತಡೆದು ಸೌಹಾರ್ದ, ಸಹಬಾಳ್ವೆಯ ಸಂದೇಶ ನೀಡಿ ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ಪಕ್ಷಾತೀತವಾಗಿ ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ರಾಜಕೀಯ ಆಸೆ ಇಲ್ಲದೆ, ಕೇವಲ ಜನರ ಒಳಿತಿಗಾಗಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತೆ ರಾಹುಲ್ ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಮಹದುದ್ದೇಶದ ಯಾತ್ರೆಗೆ ಜೊತೆಯಾಗಲು ಹಾಸನ ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ತೆರಳುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಧ್ಯಾಹ್ನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 48 ಬಸ್‌ಗಳು, 10 ಖಾಸಗಿ ಬಸ್‌ಗಳು, 46 ಟೆಂಪೊಗಳು ಮತ್ತು ನೂರಾರು ವೈಯಕ್ತಿಕ ವಾಹನಗಳಲ್ಲಿ ಸಾವಿರಾರು ಕಾರ್ಯಕರ್ತರು ಪ್ರಯಾಣ ಬೆಳೆಸಿದರು. ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಹಾಸನ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಜೊತೆಗೂಡುವರು. ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ಬನವಾಸೆ ರಂಗಸ್ವಾಮಿ, ಬಾಗೂರು ಮಂಜೇಗೌಡ, ಬಿ.ಕೆ. ರಂಗಸ್ವಾಮಿ, ತಾರಾ ಚಂದನ್, ಮುನಿಸ್ವಾಮಿ, ಆರ್ೀ ಮತ್ತಿತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net