

ಹಾಸನ: ರಾಹುಲ್‌ಗಾಂಧಿ ಭಾರತ್ ಜೊಡೋ ಯಾತ್ರೆ ಮಾಡುತ್ತಿಲ್ಲ, ಅದು ತೋಡೋ ಯಾತ್ರೆಯಾಗಿದೆ.ತಾತ, ಅಜ್ಜಿ ಇದ್ದಾಗ, ಭಾರತ ವಿಭಜನೆ ಮಾಡಿದರು. ಈಗ ದೇಶ ಒಗ್ಗೂಡಿಸುವ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.
ಇಂಡಿಯಾ ಒಕ್ಕೂಟ ಛಿದ್ರವಾಗುತ್ತಿದ್ದು, ಅದರ ಬಲ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ನರೇಂದ್ರಮೋದಿ ಅವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ, ಕಾಂಗ್ರೆಸ್‌ಗೆ ಬಿಜೆಪಿ, ನರೇಂದ್ರಮೋದಿ ಮೇಲೆ ಆರೋಪ ಮಾಡುವುದು ಬಿಟ್ಟರೆ ಬೇರೆ ಏನೂ ಕೆಲಸ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಯಲ್ಲಿ ಕಿಡಿಕಾರಿದರು.
ಸೂರ್ಯಚಂದ್ರ ಇರೋದು ಎಷ್ಟು ಸತ್ಯವೋ ನರೇಂದ ಮೋದಿಯವರು ಮತ್ತೆ ಪ್ರಧಾನ ಮಂತ್ರಿ ಆಗೋದು ಅಷ್ಟೇ ಸತ್ಯ. ಕೇಂದ್ರದಲ್ಲಿ
ಮೋದಿ ಅವರ ಸರ್ಕಾರ ಜನಪರ, ರೈತರ ಪರ ಎಲ್ಲಾ ವರ್ಗದವರ ಪರ ಆಡಳಿತ ನೀಡಿ 10 ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ನಡೆಸಿದ್ದಾರೆ. ದೇಶದಲ್ಲಿ 400 ಮಂದಿ ಲೋಕಸಭಾ ಸದಸ್ಯರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕಕ್ಕೆ ಏನು ಅನ್ಯಾಯವಾಗಿದೆ, ಆದರೂ ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಕರ್ನಾಟಕದ ಗೌರವವನ್ನು ಹಾಳು ಮಾಡಿದ್ದಾರೆ ಎಂದು ಕಿಡಿ ಕಾರಿದ ಅವರು, ದೇಶ ವಿಭಜನೆ ಬಗ್ಗೆ ಮಾತನಾಡುವವರು ದೇಶದ್ರೋಹಿಗಳು ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ವಿಫಲವಾಗಿದ್ದು, ಸಂಪೂರ್ಣ ದಿವಾಳಿಯಾಗಿದೆ.ಲೋಕಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ, ರಾಜ್ಯ ಸರ್ಕಾರ ನೀಡಿರುವ ಯಾವುದೇ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪಿಲ್ಲ, ತಲುಪುತ್ತಿಲ್ಲ. ಅನ್ನಭಾಗ್ಯ, ಶಕ್ತಿ, ಗೃಹಲಲಕ್ಷ್ಮೀ, ಯುವನಿಧಿ, ಉಚಿತ ವಿದ್ಯುತ್ ಯೋಜನೆಗಳು ಅರ್ಧದಷ್ಟು ಜನರಿಗೂ ದೊರೆಯುತ್ತಿಲ್ಲ ಎಂದು ದೂರಿದರು. ಇದನ್ನೆಲ್ಲಾ ರಾಜ್ಯದ ಜನ ಗಮನಿಸುತ್ತಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ವರಿಷ್ಠರು ಈಗಾಗಲೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಈ ಬಾರಿ ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಕೂಡ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹೆಚ್.ಎನ್.ನಾಗೇಶ್, ಚನ್ನಕೇಶವ, ಶೋಭನ್ ಬಾಬು ಇದ್ದರು.