ಭಾರತೀಯರ ಹಕ್ಕುಗಳ ರಕ್ಷಕವೇ ಸಂವಿಧಾನ

15hbd1
ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ಭಾನುವಾರ ಆಯೋಜಿಸಿದ್ದ ಅಂಬೇಡ್ಕರ್ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಿದರು. ಭಂತೆ ಧಮ್ಮಾನಂದ ಥೇರೋ, ಜ್ಞಾನಸಾಗರ ಭಂತೆ, ರಾಜಶೇಖರ ಪಾಟೀಲ್, ಡಾ.ಸಿದ್ದಲಿಂಗಪ್ಪ ಪಾಟೀಲ್, ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಅರವಿಂದ ಅರಳಿ, ಅಭಿಷೇಕ್ ಪಾಟೀಲ್, ಡಿ.ಜಿ. ಸಾಗರ್, ಡಾ.ತ್ಯಾತರಾವ ಕಾಂಬ್ಳೆ, ಲಕ್ಷ್ಮಣರಾವ ಬುಳ್ಳಾ ಇತರರಿದ್ದರು.
Published on

ಹುಮನಾಬಾದ್: ಸಂವಿಧಾನ ಕೇವಲ ಪರಿಶಿಷ್ಟ ಸಮುದಾಯಕ್ಕೆ ಸೀಮಿತವಾಗಿಲ್ಲ. ಇದು ಭಾರತದ ೧೪೦ ಕೋಟಿ ಜನರ ಹಕ್ಕುಗಳನ್ನು ರಕ್ಷಣೆ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ದುಬಲಗುಂಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣಗೊಳಿಸಿ ಮಾತನಾಡಿದ ಅವರು, ಮನುವಾದಿಗಳು ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಅಧಿಕಾರದಿಂದ ದೂರವಿಟ್ಟರು. ಈ ಎಲ್ಲರಿಗೂ ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅಧಿಕಾರ ನೀಡಿದರು ಎಂದರು.

ಅಧಿಕಾರ ಮತ್ತು ಸಿದ್ಧಾಂತಗಳ ಮಧ್ಯೆ ಸಮಾನತೆ ಬಂದಾಗ ಮಾತ್ರ ಸಮಾಜ ಬಲಾವಣೆ ಮಾಡಲು ಸಾಧ್ಯ. ಶೋಷಿತ ಸಮುದಾಯಗಳ ಜನರಿಗೆ ಸಾಮಾಜಿಕ ನ್ಯಾಯ ನೀಡಿದ ಬಾಬಾ ಸಾಹೇಬರ ಚಿಂತನೆಗಳ ಮಹತ್ವ ಇಂದಿನ ಯುವ ಪೀಳಿಗೆಗಳು ಅರಿತುಕೊಳ್ಳಬೇಕು ಎಂದರು.

ಡಾ.ಅಂಬೇಡ್ಕರ್ ಹಾಗೂ ಡಾ.ಬಾಬುಜಗಜೀವನ್ ರಾಮ್ ಅವರ ಸಮುದಾಯ ಭವನಕ್ಕೆ ಅಗತ್ಯವಿರುವ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಆಣದೂರಿನ ಭಂತೆ ಧಮ್ಮಾನಂದ ಥೇರೋ, ಭಂತೆ ಜ್ಞಾನಸಾಗರ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ್, ಪ್ರಮುಖರಾದ ಡಿ.ಜಿ. ಸಾಗರ್, ಡಾ.ತ್ಯಾತರಾವ ಕಾಂಬ್ಳೆ, ಲಕ್ಷ್ಮಣರಾವ ಬುಳ್ಳಾ, ಅಂಕುಶ ಗೋಖಲೆ, ರಮೇಶ ಡಾಕುಳಗಿ, ಬಾಬು ಟೈಗರ್, ಮಲ್ಲಿಕಾರ್ಜುನ ಮಹೇಂದ್ರಕರ್, ಲಕ್ಷ್ಮೀಪುತ್ರ ಮಾಳಗೆ, ಶಿವರಾಜ ಗಂಗಶೆಟ್ಟಿ, ಚೇತನ್ ಗೋಖಲೆ, ಪ್ರಭುರಾವ ತಾಳಮಡಗಿ, ಸುರೇಶ ಘಾಂಗ್ರೆ, ಮಾಣಿಕರಾವ ಪವಾರ್, ನಾಗರಾಜ ಭೋಜಗುಂಡಿ, ರಮೇಶ ಚಾಂದೆ, ಶ್ರೀರಂಗನಾಥ ಭೋಲಾ, ಸುನೀಲ ಭೋಲಾ, ರವೀಂದ್ರ ಭಾಗ್ಯಕರ್, ರಮೇಶ ಸಂಘನಾಯಕ್, ಇಂದ್ರಜೀತ ಮಿತ್ರಾ ಇತರರಿದ್ದರು.

೫೦ ಲಕ್ಷ ರೂ. ಅನುದಾನ ಕೊಡಿ: ದುಬಲಗುಂಡಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಮ್ ಸಮುದಾಯ ಭವನಕ್ಕೆ ೫೦ ಲಕ್ಷ ರೂ. ಅನುದಾನ ಒದಗಿಸಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರು ಸಚಿವರಿಗೆ ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ನನ್ನ ಅವಧಿಯಲ್ಲಿ ಸಮುದಾಯ ಭವನಕ್ಕೆ ೨೨ ಲಕ್ಷ ರೂ. ಅನುದಾನ ನೀಡಲಾಗಿತ್ತು. ಈ ಕಾಮಗಾರಿಗಳು ಪೂರ್ಣಗೊಳಿಸಲು ೫೦ ಲಕ್ಷ ರೂ. ಅಗತ್ಯವಿದ್ದು, ಸಚಿವರು ವಿಶೇಷ ಕಾಳಜಿ ವಹಿಸಿ ಮಂಜೂರು ಮಾಡಬೇಕು ಎಂದರು. ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕ ಹಾಗೂ ಒಂದು ಬಾರಿ ಸಚಿವನಾಗಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಜನರ ಸೇವೆ ಮಾಡಿದ್ದೇನೆ. ಗ್ರಾಮದ ಅಂಬೇಡ್ಕರ್ ಭವನ, ಅಂಬೇಡ್ಕರ್ ವೃತ್ತ, ಬುದ್ಧ ವಿಹಾರದಲ್ಲಿ ಕೊಳವೆ ಬಾವಿ ಕೊರೆಸುವುದಕ್ಕೆ ನನ್ನ ಅವಧಿಯಲ್ಲಿ ಅನುದಾನ ನೀಡಿದ್ದೇನೆ. ಜತೆಗೆ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಅನುದಾನ ಒದಗಿಸಲಾಗಿದೆ ಎಂದರು.

ದುಬಲಗುಂಡಿಯಲ್ಲಿ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನ್ ರಾಮ್ ಸಮುದಾಯ ಭವನ ಪೂರ್ಣಗೊಳಿಸಲು ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು.

| ಡಾ.ಸಿದ್ದಲಿಂಗಪ್ಪ ಪಾಟೀಲ್

ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net