ಭಾರತೀಯರ ನರ-ನಾಡಿಗಳಲ್ಲಿದೆ ಶ್ರದ್ಧೆ-ಭಕ್ತಿ

MAY 13-HRP-02
Published on

ಹರಪನಹಳ್ಳಿ: ನಾವೆಲ್ಲರೂ ಭಾರತೀಯರು ಎನ್ನುವ ಸಮನ್ವಯ ಭಾವ ನಮ್ಮಲ್ಲಿ ಮೂಡಬೇಕು. ಭಾರತ ಮಂದಿರಗಳ ದೇಶವಾಗಿದೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಹೊಂಬಳಗಟ್ಟಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ, ಕರಿಯಮ್ಮ ದೇವಿ ಮತ್ತು ಮಾರಮ್ಮ ದೇವಿ ದೇವಾಲಯ ಉದ್ಘಾಟನೆ, ಕಲಶಾರೋಹಣ ಹಾಗೂ ಕರಿಗಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಂಗಳವಾರ ಆಶೀರ್ವಚನ ನೀಡಿದರು. ಭಾರತೀಯರ ನರ ನಾಡಿಗಳಲ್ಲಿ ದೇವರು ಹಾಗೂ ಮಠ-ಮಂದಿರಗಳ ಬಗ್ಗೆ ಅತ್ಯಂತ ಶ್ರದ್ಧಾ ಭಕ್ತಿ ಇದೆ. ಎಲ್ಲರೂ ಉತ್ತಮ ಚಾರಿತ್ರ್ಯ ಹೊಂದುವುದರೊಂದಿಗೆ ಶಿಕ್ಷಣ ಪಡೆಯಬೇಕು. ಜ್ಞಾನ ಸಂಪತ್ತು ಪಡೆದು ಸಮಾಜದಲ್ಲಿ ಸಂಸ್ಕಾರಯುತ ಶ್ರೇಷ್ಠ ಪ್ರಜೆಯಾಗಿ ಜೀವಿಸಬೇಕು.ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ. ಅವರಿಗೆ ಕಳಂಕ ತರುವ ಕೆಲಸ ಮಾಡಿದರೆ ನೀವು ಇದ್ದೂ ಸತ್ತಂತೆ. ಅನ್ಯ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ಭಕ್ತರಲ್ಲಿ ಅರ್ಪಣಾ ಭಾವವಿರಬೇಕು, ಢಾಂಬಿಕ ಭಕ್ತಿ ಮುಳುಗಿ ಹೋಗುವ ಭಕ್ತಿಗೆ ಸಮಾನವಾಗಿದೆ. ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿದವರನ್ನು ಮರೆಯಬಾರದು, ಪಾರ್ವತಿಯ ಪ್ರತಿ ರೂಪಗಳೇ ಕರಿಯಮ್ಮ, ಮಾರಮ್ಮ ದೇವತೆಗಳಾಗಿದ್ದಾರೆ. ಗ್ರಾಮಕ್ಕೆ ಯಾರ ಕೆಟ್ಟ ದೃಷ್ಟಿ ಬೀಳದಂತೆ ಹಾಗೂ ಗ್ರಾಮ ಸುಭಿಕ್ಷೆಯಿಂದ ಇರಲು ಕರಿಗಲ್ಲನ್ನು ನಿರ್ಮಿಸಲಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.

ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ವರಸದ್ಯೋಜಾತ ಸ್ವಾಮೀಜಿ ಮಾತನಾಡಿ. ಜಗತ್ತನ್ನು ಬೆಳಗಲು ಅನೇಕ ಮಹಾನ್ ಪುರುಷರು ದೇಶದಲ್ಲಿ ಜನಿಸಿ ಸಮಾಜದ ಸುಧಾರಣೆಗೆ ಶ್ರಮಿಸುವ ಕಾರ್ಯ ಮಾಡಿದ್ದಾರೆ. ಇಂದು ನಾವುಗಳು ಅವರ ತತ್ವ ಆದರ್ಶಗಳನ್ನು ಪಾಲಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದರು.

ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಗ್ರಾಮಗಳಿಗೆ ಬರುತ್ತಿದ್ದ ಕ್ಷಾಮ ಬಾಧೆಗಳನ್ನು ತಡೆಗಟ್ಟಲು ದೇವಾನು ದೇವತೆಗಳ ದೇವಾಲಯಗಳನ್ನು ನಿರ್ಮಿಸಿ ಶಾಂತಿ ನೆಲೆಸುವಂತೆ ಮಾಡುತ್ತಾ ಬರಲಾಗಿದೆ. ಧಾರ್ಮಿಕ ಕಾರ್ಯಗಳಿಂದ ಗ್ರಾಮಗಳು ಸಕಲ ರೀತಿಯಲ್ಲಿ ಸಂಪದ್ಬರಿತವಾಗುತ್ತವೆ ಎಂದು ವರಸದ್ಯೋಜಾತ ಸ್ವಾಮೀಜಿ ತಿಳಿಸಿದರು.

ಕೊಟ್ಟೂರು ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ. ಮಠ-ಮಂದಿರಗಳ ನಿರ್ಮಾಣದಿಂದ ಸರ್ವಧರ್ಮೀಯರಲ್ಲಿ ಭಾವೈಕ್ಯ ಬೆಳೆಸಲು ಸಾಧ್ಯ. ದೇಶ ಇತ್ತೀಚಿಗೆ ದುಷ್ಕರ್ಮಿಗಳಿಂದ ಕೆಲ ಕಾಲ ಸಂಕಷ್ಟ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಲ್ಲಿಯ ಅನ್ನ ತಿಂದು ದೇಶಕ್ಕೆ ದ್ರೋಹ ಬಗೆಯುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಹಗರಿಬೊಮ್ಮನಹಳ್ಳಿಯ ಶಿವಯೋಗಿ ಹಾಲಸಿದ್ದೆಶ್ವರ ಹಾಲಸ್ವಾಮೀಜಿ, ಮುತ್ತಿಗಿ ಅಜ್ಜಯ್ಯ ಹಾಲಸ್ವಾಮೀಜಿ, ಪ್ರಮುಖರಾದ ವೀಣಾ ಮಹಾಂತೇಶ್, ಲಲಿತಮ್ಮ, ಅನುಷಾ, ಪಿ ಸುಬ್ಬಣ್ಣ, ಕೊಟ್ರಯ್ಯ ಎಚ್.ಎಂ., ಬೊಮ್ಮಪ್ಪ, ಪೂಜಾರ ಸಣ್ಣ ಮಾರಪ್ಪ, ನವೀನ ಕುಮಾರ, ಮಂಜುನಾಥ, ಅನ್ವರ್ ಸಾಹೇಬ್, ಮೆಹಬೂಬ್ ಸಾಬ್, ಹೊಳಿಬಸಯ್ಯ, ರೇಣುಕ ಸ್ವಾಮಿ, ಪೂಜಾರ ಅಂಜಿನಪ್ಪ, ವೀರ ಬೊಮ್ಮಪ್ಪ, ನಿಂಬಳಗೇರಿ ಮಂಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net