ಭಾರತೀಯರ ಕೊಡುಗೆ ಅಪಾರ

10Manju1
ಬೆಳಗಾವಿಯ ವಿಟಿಯು ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಘಟಿಕೋತ್ಸವದಲ್ಲಿ ಸೇನಾಪತಿ ಕ್ರಿಸ್ ಗೋಪಾಲಕೃಷ್ಣ ಅವರಿಗೆ ರಾಜ್ಯಪಾಲ ಥಾರವಚಂದ ಗೆಹ್ಲೋತ್, ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ, ಪ್ರೊ.ಕರಿಸಿದ್ದಪ್ಪ, ಪ್ರೊ.ರಂಗಸ್ವಾಮಿ ಬಿ.ಇ. ಮತ್ತಿತರರು ಇದ್ದರು.
Published on

ಬೆಳಗಾವಿ: ಜಗತ್ತಿನಲ್ಲಿ ಕರ್ನಾಟಕದ ತಾಂತ್ರಿಕ ವಿದ್ಯಾರ್ಥಿಗಳು ಆಯಾ ದೇಶದ ಬೆಳವಣಿಗೆಯಲ್ಲಿ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ, ಜಗತ್ತಿನ ಅತ್ತುತ್ತಮ ಸ್ಟಾರ್ಟ್‌ಅಪ್ ಕಂಪನಿಗಳಲ್ಲಿ ಭಾರತೀಯ ಯುವ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಜ್ಞಾನಸಂಗಮ ಆವರಣದ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಟಿಯು-21 ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಡಿಜಿಟಲ್, ಐಟಿ, ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕರ್ನಾಟಕದ ಯುವ ಸಮುದಾಯದ ಕೊಡುಗೆ ದೊಡ್ಡದಾಗಿದೆ. ಪ್ರಾದೇಶಿಕ ಭಾಷೆ ಕನ್ನಡದಲ್ಲಿ ವಿಟಿಯು ಇಂಜಿನಿಯರಿಂಗ್ ಶಿಕ್ಷಣ ಅಳವಡಿಸಿದ್ದು ಒಳ್ಳೆಯ ಬೆಳವಣಿಗೆ ಎಂದರು.

ವಿದ್ಯಾರ್ಥಿಗಳಿಗೆ ಸಲಹೆ: ಭಾರತದ ನವನಿರ್ಮಾಣಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ ಡಾ. ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರನಲ್ಲಿ ಶಿಕ್ಷಣ ನೀಡುತ್ತಿರುವ ವಿಟಿಯುನಲ್ಲಿ ಪದವಿ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಗೌರವದ ವಿಷಯ. ಸಂಪಾದಿಸಿದ ಜ್ಞಾನವನ್ನು ದೇಶದ ಅಭಿವೃದ್ಧಿಗೆ, ಹೊಸತನದ ನಿರ್ಮಾಣಕ್ಕೆ ವಿನಿಯೋಗಿಸಬೇಕು. ದೇಶದ ಆದರ್ಶ ವ್ಯಕ್ತಿಗಳ ಚಿಂತನೆಗಳ ಬೆಳಕಲ್ಲಿ ಬೆಳೆಯುತ್ತಿರುವ ತಾವುಗಳು ಜೀವನದಲ್ಲಿ ಸಾಮಾನ್ಯರಾಗಿ ಉಳಿಯದೆ ಅಸಾಮಾನ್ಯರಾಗಿ ಗುರುತಿಸಲ್ಪಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಾರತವಾಗಲಿ ವಿಶ್ವಗುರು: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರುತ್ತಿರುವ ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ವೈದ್ಯಕೀಯ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳುವ ಮೂಲಕ ಇನ್ನಷ್ಟು ಪರಿಣಾಮಕಾರಿ ಚಿಕಿತ್ಸೆಗೆ ಭಾರತೀಯ ಯುವಕರು ಮುಂದಾಗಬೇಕು. ಡಿಜಿಟಲ್ ಶಿಕ್ಷಣದಲ್ಲಿ ಸವಾಲುಗಳು ಹೆಚ್ಚಿದ್ದರೂ ಸತತ ಬದಲಾವಣೆಯಿಂದಾಗಿ ಜಗತ್ತಿನ ವಿಷಯಗಳನ್ನು ಅತಿ ಕಡಿಮೆ ಅವಧಿಯಲ್ಲಿ ಕಲಿಯುವ ಅವಕಾಶ ಹೆಚ್ಚಿದೆ. ಭಾರತೀಯ ಯುವ ಸಮೂಹ ಭಾರತವನ್ನು ವಿಶ್ವಗುರುವನ್ನಾಗಿಸುವ ಕಾಲ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಯೋಗ ಯೋಜನೆ: ಕರ್ನಾಟಕವು ಇನ್ನಷ್ಟು ಹೇರಳವಾಗಿ ಉದ್ಯೋಗಾವಕಾಶ ತೆರೆದಿಟ್ಟಿದೆ. ವಿಟಿಯು ಕೈಗಾರಿಕಾ ಕ್ಷೇತ್ರದೊಂದಿಗೆ ಮಾಡಿಕೊಂಡಿರುವ ‘ಸೂಪರ್-30’ ಯೋಜನೆ ಬರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆ ತರಲಿದೆ. 4 ಲಕ್ಷ ಉದ್ಯೋಗ ಖಾಲಿ ಇದ್ದರೂ ವಿದ್ಯಾರ್ಥಿಗಳ ಕೊರತೆ ಕಂಡು ಬರುತ್ತಿದೆ. ಪದವಿ ಪಡೆದರೂ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಕೌಶಲತೆ ಕಂಡು ಬರುತ್ತಿಲ್ಲ. ಹೀಗಾಗಿ ಟ್ಯಾಲೆಂಟ್ ಎಕ್ಸಲೆರೇಷನ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಸರ್ವರಿಗೂ ಉದ್ಯೋಗ ನೀಡುವ ಯೋಜನೆಯನ್ನು ಬೆಳಗಾವಿಯಿಂದಲೇ ಆರಂಭಿಸಲಾಗುವುದು ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಸಂಸದೆ ಮಂಗಲ ಅಂಗಡಿ, ವಿಟಿಯು ಕುಲಸಚಿವ ಪ್ರೊ. ಆನಂದ ದೇಶಪಾಂಡೆ, ಕುಲಸಚಿವ (ಮೌಲ್ಯಮಾಪನ) ಪ್ರೊ. ರಂಗಸ್ವಾಮಿ ಬಿ.ಇ., ಸಿಂಡಿಕೇಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.

ಉದ್ಯೋಗ ಹುಡುಕಬೇಡಿ, ಸೃಷ್ಟಿಸಿ

ವಿಜ್ಞಾನ-ತಂತ್ರಜ್ಞಾನ, ತಾಂತ್ರಿಕ ಕ್ಷೇತ್ರದ ಸಾಧನೆಯಲ್ಲಿ ಭಾರತದ ಹೆಸರು ಮುಂಚೂಣಿಯಲ್ಲಿದೆ. ಯುವ ಸಮುದಾಯವನ್ನು ಅತ್ಯಧಿಕ ಸಂಖ್ಯೆಯಲ್ಲಿ ಹೊಂದಿರುವ ಭಾರತವನ್ನು ಇಡೀ ವಿಶ್ವ ಗಮನಿಸುತ್ತಿದೆ. 21ನೇ ಶತಮಾನವು ಭಾರತದ ಸಾಧನೆಗೆ ಸಾಕ್ಷಿಯಾಗಲಿದೆ. ನವ ಪದವೀಧರರು ದೇಶದ ಪ್ರಗತಿಯ ಭಾಗವಾಗಬೇಕು. ಉದ್ಯೋಗ ಹುಡುಕುವವರಾಗದೇ ಉದ್ಯೋಗ ಸೃಷ್ಟಿಸುವವರಾಗಬೇಕು. ಸ್ವಯಂ ಉದ್ಯೋಗ ಆರಂಭಿಸಲು ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಯೋಜನೆ ಬಳಸಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾರವಚಂದ್ ಗೆಹ್ಲೋತ್ ಸಲಹೆ ನೀಡಿದರು.

‘ಡಾಕ್ಟರ್ ಆ್ ಸೈನ್ಸ್’ ಪದವಿ

ಇನ್ಫೋಸಿಸ್‌ನ ಸಹ ಸಂಸ್ಥಾಪಕ ಹಾಗೂ ಬೆಂಗಳೂರಿನ ಅಕ್ಸಿಲೊರ್ ವೆಂಚರ್ಸ್‌ನ ಅಧ್ಯಕ್ಷ ಸೇನಾಪತಿ ಕ್ರಿಶ್ ಗೋಪಾಲಕೃಷ್ಣನ್ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಮತ್ತು ಲೋಕಸಭಾ ಸಭಾಧ್ಯಕ್ಷ ಓಂ ಬಿರ್ಲಾ ಅವರು ‘ಡಾಕ್ಟರ್ ಆ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹೈದರಾಬಾದ್‌ನ ಭಾರತ ಬಯೋಟೆಕ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲಾ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಪ್ರೊ. ರೋಹಿಣಿ ಗೋಡಬೋಲೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ಘೋಷಿಸಲಾಯಿತು.

ಚಿನ್ನದ ಪದಕ ಪ್ರದಾನ

ಘಟಿಕೋತ್ಸವದಲ್ಲಿ 57,498 ಬಿಇ, ಬಿ.ಟೆಕ್, 902 ಬಿ.ಆರ್ಕ್, 12 ಬಿ ಪ್ಲಾನ್, 4,362 ಎಂಬಿಎ, 1,387 ಎಂಸಿಎ, 1,292 ಎಂ.ಟೆಕ್, 73 ಎಂ.ಆರ್ಕ್ ಮತ್ತು 33 ಪಿಜಿ ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಯಿತು. ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515 ಪಿಎಚ್.ಡಿ., 4 ಎಂ.ಎಸ್ಸಿ (ಇಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯೆಲ್ ಡಿಗ್ರಿ ಪದವಿ ಹಾಗೂ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಚಿನ್ನದ ಪದಕ ಪ್ರದಾನ ಮಾಡಿದರು.

ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿ ಸ್ಥಾಪನೆ

ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶ ಹೆಚ್ಚಿಸಲು ಕೌಶಲಾಭಿವೃದ್ಧಿ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ದಾಂಡೇಲಿ ಮತ್ತು ಕೊಪ್ಪಳದ ತಳಕಲ್ನಲ್ಲಿ ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿ ಸ್ಥಾಪಿಸಲಾಗಿದೆ. ಹೊಸ ಯೋಜನೆಗಳ ಅನುಷ್ಠಾನದ ಮೂಲಕ ವಿವಿಯನ್ನು ನಾವೀನ್ಯತೆ ಮತ್ತು ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯವಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಯುವ ಜನಾಂಗದ ಪಾತ್ರ ಹಿರಿದು

ಸಹಕುಲಾಧಿಪತಿಯಾದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಸವಾಲಿನ ಮಧ್ಯೆ ಬದುಕುತ್ತಿರುವ ಭಾರತ ದೇಶ ಸ್ವಾವಲಂಬಿಯಾಗಿ ಮುನ್ನಡೆಯುತ್ತಿದೆ. ಈ ಮಹತ್ತರ ಬದಲಾವಣೆಯ ಹಿಂದೆ ಯುವ ಜನಾಂಗದ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳು ಗಳಿಸಿದ ಪದವಿಗಳು ಉತ್ತಮ ಬದುಕು ನಿರ್ಮಿಸಿಕೊಡುವ ಸಾಧನಗಳಾಗಿವೆ. ನಿಮ್ಮ ಜ್ಞಾನವು ಕೇವಲ ಉದ್ಯೋಗ ಪಡೆಯಲಷ್ಟೇ ಸೀಮಿತವಾಗದೆ ಉದ್ಯೋಗ ಸೃಷ್ಟಿಸಲೂ ಬಳಸಿಕೊಳ್ಳಬೇಕು ಎಂದರು.

ನೀರಾವರಿ ವಿಷಯದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿರುವ ಡಾ. ಎಸ್.ಜಿ. ಬಾಳೇಕುಂದ್ರಿ ಹೆಸರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲೇ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು.| ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವವಿಟಿಯು ಗೌರವ ಡಾಕ್ಟರೇಟ್ ನೀಡಿ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ. ಕಳೆದ 40 ವರ್ಷಗಳಲ್ಲಿ ನನಗೆ ಸಹಕಾರ, ಪ್ರೋತ್ಸಾಹ ನೀಡಿದ ಸಹುದ್ಯೋಗಿಗಳು, ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಈ ಗೌರವ ಮೀಸಲು.| ಸೇನಾಪತಿ ಕ್ರಿಸ್ ಗೋಪಾಲಕೃಷ್ಣ ಇನ್ಫೋಸಿಸ್ ಸಂಸ್ಥೆ ಸಹಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net